November 14, 2026
Saturday, November 14, 2026
spot_img

ಗಿಗ್ ಕಾರ್ಮಿಕರ ಹಿತರಕ್ಷಣೆಗೆ ತೆಲಂಗಾಣ ಸರ್ಕಾರದ ಮಹತ್ವದ ಹೆಜ್ಜೆ: ಕಲ್ಯಾಣ ಯೋಜನೆಗೆ ರಾಹುಲ್ ಗಾಂಧಿ ಚಾಲನೆ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತೆಲಂಗಾಣದ ಲಕ್ಷಾಂತರ ಆನ್‌ಲೈನ್ ಡೆಲಿವರಿ ಬಾಯ್‌ಗಳು ಮತ್ತು ಕ್ಯಾಬ್ ಚಾಲಕರ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಶನಿವಾರ ‘ತೆಲಂಗಾಣ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆ’ಗೆ ಅಧಿಕೃತವಾಗಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಈ ಯೋಜನೆಯು ಗಿಗ್ ಕಾರ್ಮಿಕರಿಗೆ ತಮ್ಮದೇ ಆದ ದತ್ತಾಂಶದ ಮೇಲೆ ಹಕ್ಕನ್ನು ನೀಡುತ್ತದೆ ಎಂದು ಹೇಳಿದರು. “ನೀವು ಮಾಡುವ ಕೆಲಸ, ಪೂರ್ಣಗೊಳಿಸುವ ರೈಡ್‌ಗಳು ಮತ್ತು ಅದಕ್ಕೆ ನಿಮಗೆ ಸಿಗುವ ಹಣದ ಸಂಪೂರ್ಣ ಮಾಹಿತಿ ನಿಮ್ಮ ಮೊಬೈಲ್ ಫೋನ್‌ನಲ್ಲಿಯೇ ನೇರವಾಗಿ ಲಭ್ಯವಾಗುವಂತೆ ತೆಲಂಗಾಣ ಸರ್ಕಾರ ಖಾತರಿ ನೀಡುತ್ತಿದೆ” ಎಂದು ಅವರು ವಿವರಿಸಿದರು. ಅಲ್ಲದೆ, ಈ ಹಿಂದೆ ಗಿಗ್ ಕಾರ್ಮಿಕರೊಂದಿಗೆ ಸಂವಾದ ನಡೆಸಿದಾಗ ತಾವು ನೀಡಿದ್ದ ಭರವಸೆಗಳನ್ನು ಈ ಯೋಜನೆಯ ಮೂಲಕ ಈಡೇರಿಸಿರುವುದಾಗಿ ಅವರು ತಿಳಿಸಿದರು.

ಯಾವೆಲ್ಲಾ ಸೌಲಭ್ಯಗಳಿವೆ

ರಾಜ್ಯದ ಗಿಗ್ ಕಾರ್ಮಿಕರಿಗೆ 10 ಲಕ್ಷದವರೆಗೆ ಆರೋಗ್ಯ ವಿಮೆ ಹಾಗೂ 5 ಲಕ್ಷದವರೆಗೆ ಅಪಘಾತ ವಿಮೆ ಸೇರಿದಂತೆ ಹಲವು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ರಾಹುಲ್ ಗಾಂಧಿ ಘೋಷಿಸಿದರು.

ಫುಡ್ ಡೆಲಿವರಿ, ಕ್ಯಾಬ್ ಮತ್ತು ಇತರ ಸೇವಾ ಆಧಾರಿತ ಆ್ಯಪ್‌ಗಳು ತಮ್ಮ ಪ್ರತಿ ವಹಿವಾಟಿನ ಮೌಲ್ಯದಲ್ಲಿ ಶೇ. 1 ರಿಂದ 2 ರಷ್ಟನ್ನು ರಾಜ್ಯ ಸರ್ಕಾರ ನಿರ್ವಹಿಸುವ ಕಲ್ಯಾಣ ನಿಧಿಗೆ ಪಾವತಿಸುವುದು ಕಡ್ಡಾಯವಾಗಿದೆ. ಈ ನಿಧಿಯನ್ನು ಕಾರ್ಮಿಕರ ವಿಮೆ, ಪಿಂಚಣಿ ಮತ್ತು ಹೆರಿಗೆ ಸೌಲಭ್ಯಗಳಿಗೆ ಬಳಸಲಾಗುವುದು.

ಇದನ್ನೂ ಓದಿ:

ಕಾರ್ಮಿಕರ ನೋಂದಣಿಗಾಗಿ ‘ಭದ್ರತೆ ಮತ್ತು ಕಲ್ಯಾಣ ಮಂಡಳಿ’ಯನ್ನು ಸ್ಥಾಪಿಸಲಾಗಿದೆ. ನೋಂದಾಯಿತ ಪ್ರತಿಯೊಬ್ಬ ಕಾರ್ಮಿಕರಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಇದರ ಮೂಲಕ ಅವರು ಸರ್ಕಾರದ ಯೋಜನೆಗಳ ಲಾಭವನ್ನು ನೇರವಾಗಿ ಪಡೆಯಬಹುದು.

 ಹಾಗೆಯೇ ಕೆಲಸದ ನಡುವೆ ಕಾರ್ಮಿಕರು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಹೈದರಾಬಾದ್ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವೈ-ಫೈ ಸೌಲಭ್ಯವುಳ್ಳ ವಿಶೇಷ ವಿಶ್ರಾಂತಿ ವಲಯಗಳನ್ನು ನಿರ್ಮಿಸಲಾಗುವುದು.

ಏಕಾಏಕಿ ಪಾವತಿ ತಡೆಹಿಡಿಯುವುದು ಅಥವಾ ಕೆಲಸದಿಂದ ವಜಾಗೊಳಿಸುವುದರಿಂದ ಕಾರ್ಮಿಕರನ್ನು ರಕ್ಷಿಸಲು ಕಂಪನಿ ಮಟ್ಟದ ಸಮಿತಿಗಳು ಮತ್ತು ಜಿಲ್ಲಾ ಮಟ್ಟದ ದೂರು ನಿವಾರಣಾ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಕಂಪನಿಗಳಿಗೆ ಕಟ್ಟುನಿಟ್ಟಿನ ನಿಯಮ

ತೆಲಂಗಾಣ ಸರ್ಕಾರವು ಮಾರ್ಚ್ 30 ರಂದು ಅಂಗೀಕರಿಸಿದ್ದ ‘ತೆಲಂಗಾಣ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಮಸೂದೆ, 2026’ ರ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಆರ್ಡರ್ ಹಂಚಿಕೆ ಮತ್ತು ಪಾವತಿ ಲೆಕ್ಕಾಚಾರಗಳಲ್ಲಿ ಕಂಪನಿಗಳು ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಮನಬಂದಂತೆ ದರ ಕಡಿತ ಮಾಡುವ ಕಂಪನಿಗಳಿಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

Must Read

Skip to toolbar