ಹೊಸದಿಗಂತ ವರದಿ ರಾಮನಗರ:
ದೇವಸ್ಥಾನ ಯಾರೋ ಒಬ್ಬರ ಸ್ವತ್ತಲ್ಲ, ಅದು ಇಡೀ ಸಮಾಜದ ಸ್ವತ್ತು. ದೇವಾಲಯಕ್ಕೆ ಪ್ರವೇಶ ನಿರಾಕರಿಸಿ ಬೀಗ ಹಾಕಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಇದನ್ನು ಯಾರೂ ಒಪ್ಪುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ತಾಲ್ಲೂಕಿನ ಕೂಟಗಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾರೋಹಳ್ಳಿ ತಾಲೂಕಿನ ದೊಡ್ಡಕುರುಬರಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ದೇವಾಲಯ ಪ್ರವೇಶ ನಿರಾಕರಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀಗ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದೇವಸ್ಥಾನಕ್ಕೆ ಎಲ್ಲರಿಗೂ ಪ್ರವೇಶದ ಅವಕಾಶ ಕೊಡಬೇಕು. ಯಾರೋ ಒಬ್ಬ ಕಿಡಿಗೇಡಿ ಈ ಕೃತ್ಯ ಮಾಡಿದ್ದಾನೆ ಎಂಬ ಮಾಹಿತಿ ಇದೆ. ಈ ಘಟನೆ ಖಂಡನೀಯ ಎಂದು ಈಗಾಗಲೇ ನಮ್ಮ ಶಾಸಕರೂ ಹೇಳಿದ್ದಾರೆ. ರಾಜ್ಯದಲ್ಲಿ ಎಲ್ಲೂ ಕೂಡ ಇಂತಹ ಘಟನೆಗಳು ಮರುಕಳಿಸಬಾರದು ಎಂದರು.
ಮೆಟ್ರೋ ಅನುದಾನ ಜಟಾಪಟಿ
ಇದೇ ವೇಳೆ ಮೆಟ್ರೋ ಅನುದಾನ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ನಡೆಯುತ್ತಿರುವ ಜಟಾಪಟಿ ಕುರಿತು ಮಾತನಾಡಿದ ಸಚಿವರು, ಜಟಾಪಟಿ ಮಾಡುತ್ತಿರುವುದು ಕಾರ್ಯಕರ್ತರೇ ಹೊರತು ಸಿಎಂ ಅಥವಾ ಪಿಎಂ ಅಲ್ಲ. ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದಾಗ ನಮ್ಮ ಮುಖ್ಯಮಂತ್ರಿಗಳು ರಾಜ್ಯದ ಅಹವಾಲನ್ನು ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ ಅಷ್ಟೇ. ಇಲ್ಲಿ ಕುಳಿತು ಜಟಾಪಟಿ ಮಾಡುವ ವಿರೋಧ ಪಕ್ಷಗಳ ನಾಯಕರು ಕೇಂದ್ರದ ಬಳಿ ಹೋಗಿ ಹೋರಾಟ ಮಾಡಲಿ ಎಂದರು.
ಮೋದಿ ಹತ್ತಿರ ಕುಳಿತು ರಾಜ್ಯಕ್ಕೆ ಬರಬೇಕಾದ ಹಣವನ್ನು ಬಿಡುಗಡೆ ಮಾಡಿಸಲಿ. ಆದರೆ ರಾಜ್ಯ ಬಿಜೆಪಿ ನಾಯಕರು ಮೋದಿ ಹತ್ತಿರ ಮಾತನಾಡಲು ಸಿದ್ಧರಿಲ್ಲ, ಅಷ್ಟಕ್ಕೂ ಮೋದಿಯವರಿಗೆ ಇವರ ನೆನಪು ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ತಿಳಿಸಿದರು.
ವಿ.ಸೋಮಣ್ಣ ಆರೋಪಕ್ಕೆ ತಿರುಗೇಟು
ಹೆಜ್ಜಾಲ-ಚಾಮರಾಜನಗರ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾರಿ ಹೇಳಿದ್ದು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಅಂತ? ಸೋಮಣ್ಣ ನನಗೆ ಜವಾಬ್ದಾರಿ ಕೊಡಲಿ, ನಾನೇ ಮುಂದೆ ನಿಂತು ಭೂಸ್ವಾಧೀನ ಮಾಡಿಸಿಕೊಡುತ್ತೇನೆ. ಸುಮ್ಮನೆ ಕಾಟಾಚಾರದ ಮಾತುಗಳನ್ನಾಡಬಾರದು. ನಾವು ದುಡ್ಡು ಕೊಡುತ್ತೇವೆ, ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಲ್ಲ ಎಂದರೆ ಏನರ್ಥ? ಸೋಮಣ್ಣ ಸಿಎಂಗೆ ಬರೆದಿರುವ ಪತ್ರವನ್ನು ತೋರಿಸಲಿ. ಪತ್ರ ಕೊಟ್ಟ 25 ದಿನಕ್ಕೆ ಭೂಸ್ವಾಧೀನ ಮಾಡಿಕೊಟ್ಟುಬಿಡಲು ಸಾಧ್ಯವೇ? ಆ ಪತ್ರವನ್ನು ನನಗೆ ಕೊಡಲು ಹೇಳಿ, ನಾನೇ ನೇತೃತ್ವ ವಹಿಸಿಕೊಂಡು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿಕೊಡುತ್ತೇನೆ ಎಂದರು.
ಇದನ್ನೂ ಓದಿ:
ಎ.ಟಿ.ಕೃಷ್ಣಪ್ಪ ಹೇಳಿಕೆಗೆ ಪ್ರತಿಕ್ರಿಯೆ
ಇನ್ನೂ ಜೆಡಿಎಸ್ ಶಾಸಕರಿಗೆ ಸಿಎಂ 500 ಕೋಟಿ ರೂ. ಆಫರ್ ನೀಡಿದ್ದಾರೆ ಎಂಬ ಎ.ಟಿ.ಕೃಷ್ಣಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಿದ್ದರು, ಅದಕ್ಕೆ ಸಿಎಂ ಕೊಡುತ್ತೇವೆ ಬಾ ಎಂದಿದ್ದರು. ಈಗ ಅದನ್ನೇ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನನಗೇನೂ ಅನುದಾನ ಬೇಡ, ಕುಮಾರಸ್ವಾಮಿ ಹತ್ತಿರ ಮಾಡಿಸಿಕೊಳ್ಳುತ್ತೇನೆ ಎಂದಿದ್ದಾರೆ. ಪಾಪ, ಅವರು ಕುಮಾರಸ್ವಾಮಿ ಹತ್ತಿರ ಟಿಕೆಟ್ಗಾಗಿ ಹೊಡೆದಾಡುತ್ತಿದ್ದಾರೆ. ಅಲ್ಲಿ ಟಿಕೆಟ್ಗೋಸ್ಕರ ಮಸಾಲೆ ಜಯರಾಮ್ ಮತ್ತು ಕೃಷ್ಣಪ್ಪ ಇಬ್ಬರೂ ಪೈಪೋಟಿ ನಡೆಸುತ್ತಿದ್ದಾರೆ. ಒಂದು ವೇಳೆ ಮಸಾಲೆ ಜಯರಾಮ್ ಅವರಿಗೆ ಟಿಕೆಟ್ ಘೋಷಿಸಿದರೆ, ಇವರು ನಮ್ಮಲ್ಲಿಗೆ ಬರುತ್ತಾರೆ. ಈಗ ಕಾಂಗ್ರೆಸ್ನವರು ಕರೆದರೂ ನಾನು ಹೋಗಲಿಲ್ಲ ಎಂದು ತೋರಿಸಿಕೊಳ್ಳಲು ಮತ್ತು ಕುಮಾರಸ್ವಾಮಿ ಅವರಿಂದ ಶಬ್ಬಾಶ್ಗಿರಿ ಪಡೆಯಲು ಈ ರೀತಿ ಕಥೆ, ನಾಟಕ ಆಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.



