ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರುಶನ ಪಡೆಯಲು ಕಾತರದಿಂದ ಕಾಯುತ್ತಿರುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ ಮಹತ್ವದ ಸಿಹಿಸುದ್ದಿ ನೀಡಿದೆ. ಮುಂಬರುವ ಫೆಬ್ರವರಿ ತಿಂಗಳ ಶ್ರೀವಾರಿ ದರುಶನ, ವಿವಿಧ ಅರ್ಜಿತ ಸೇವೆಗಳು ಹಾಗೂ ವಸತಿ ಕೊಠಡಿಗಳ ಆನ್‌ಲೈನ್ ಕೋಟಾ ಬಿಡುಗಡೆಯ ಅಧಿಕೃತ ವೇಳಾಪಟ್ಟಿಯನ್ನು ಟಿಟಿಡಿ ಪ್ರಕಟಿಸಿದೆ. ನವೆಂಬರ್ 18 ರಿಂದ ನವೆಂಬರ್ 24ರವರೆಗೆ ಹಂತ ಹಂತವಾಗಿ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ.
ಮೊದಲ ಹಂತದಲ್ಲಿ ಸುಪ್ರಭಾತ, ಅರ್ಚನ ಮತ್ತು ಅಷ್ಟದಳ ಪಾದಪದ್ಮಾರಾಧನೆ ಸೇವೆಗಳ ಟಿಕೆಟ್ ಕೋಟಾ ನವೆಂಬರ್ 18ರ ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ಭಕ್ತರು ನವೆಂಬರ್ 20ರ ಬೆಳಿಗ್ಗೆ 10 ಗಂಟೆಯವರೆಗೆ ಎಲೆಕ್ಟ್ರಾನಿಕ್ ಡಿಪ್ (ಲಕ್ಕಿ ಡಿಪ್) ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾದ ಅದೃಷ್ಟಶಾಲಿ ಭಕ್ತರು ನವೆಂಬರ್ 22ರ ಮಧ್ಯಾಹ್ನ 12 ಗಂಟೆಯೊಳಗೆ ನಿಗದಿತ ಶುಲ್ಕ ಪಾವತಿಸಿ ತಮ್ಮ ಟಿಕೆಟ್ ಖಚಿತಪಡಿಸಿಕೊಳ್ಳಬೇಕು.
ನವೆಂಬರ್ 21ರಂದು ಬೆಳಿಗ್ಗೆ 10 ಗಂಟೆಗೆ ಕಲ್ಯಾಣೋತ್ಸವ, ಊಂಜಲ್ ಸೇವೆ, ಅರ್ಜಿತ ಬ್ರಹ್ಮೋತ್ಸವ ಹಾಗೂ ಸಹಸ್ರದೀಪಾಲಂಕಾರ ಸೇವೆಗಳ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಸೇವೆಗಳು ಮತ್ತು ಸಂಬಂಧಿತ ದರುಶನ ಸ್ಲಾಟ್‌ಗಳ ಕೋಟಾ ಭಕ್ತರಿಗೆ ತೆರೆದುಕೊಳ್ಳಲಿದೆ.
ನವೆಂಬರ್ 23ರಂದು ಬೆಳಿಗ್ಗೆ 10 ಗಂಟೆಗೆ ಅಂಗಪ್ರದಕ್ಷಿಣಾ ಟೋಕನ್‌ಗಳು ಹಾಗೂ ಬೆಳಿಗ್ಗೆ 11 ಗಂಟೆಗೆ ಶ್ರೀವಾಣಿ ಟ್ರಸ್ಟ್ ದರುಶನ ಟಿಕೆಟ್‌ಗಳು ಬಿಡುಗಡೆಯಾಗಲಿವೆ. ಅಲ್ಲದೆ, ವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಭಕ್ತರಿಗಾಗಿ ಮೀಸಲಿರುವ ಉಚಿತ ವಿಶೇಷ ದರುಶನ ಟೋಕನ್‌ಗಳನ್ನು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ.
ಭಕ್ತರು ಅತಿ ಹೆಚ್ಚು ನಿರೀಕ್ಷಿಸುವ ರೂ. 300ರ ವಿಶೇಷ ಪ್ರವೇಶ ದರುಶನ ಟಿಕೆಟ್‌ಗಳನ್ನು ನವೆಂಬರ್ 24ರ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು. ಅದೇ ದಿನ ಮಧ್ಯಾಹ್ನ 3 ಗಂಟೆಗೆ ತಿರುಮಲ ಮತ್ತು ತಿರುಪತಿಯಲ್ಲಿನ ವಸತಿ ಕೊಠಡಿಗಳ ಕೋಟಾವನ್ನು ಸಹ ಬಿಡುಗಡೆ ಮಾಡಲಾಗುತ್ತಿದ್ದು, ಯಾತ್ರಿಕರು ತಮ್ಮ ವಾಸ್ತವ್ಯಕ್ಕೆ ಕೊಠಡಿಗಳನ್ನು ಕಾಯ್ದಿರಿಸಿಕೊಳ್ಳಬಹುದು.
ಆನ್‌ಲೈನ್ ಟಿಕೆಟ್ ಬುಕಿಂಗ್ ಹೆಸರಿನಲ್ಲಿ ವಂಚಿಸುವ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ಟಿಟಿಡಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಭಕ್ತರು ಕೇವಲ ಟಿಟಿಡಿಯ ಅಧಿಕೃತ ವೆಬ್‌ಸೈಟ್ ಆದ https://ttdevasthanams.ap.gov.in ಮೂಲಕ ಮಾತ್ರ ಟಿಕೆಟ್ ಮತ್ತು ಕೊಠಡಿಗಳನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.



