November 15, 2026
Sunday, November 15, 2026
spot_img

ಆಗಸದಲ್ಲಿ ಕಂಗಾಲಾದ ತರಬೇತಿ ಪೈಲಟ್‌ಗೆ ದಾರಿದೀಪವಾದ ಏರ್ ಟ್ರಾಫಿಕ್ ಕಂಟ್ರೋಲರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ವಾಯುಯಾನ ಇತಿಹಾಸದಲ್ಲಿ ಶುಕ್ರವಾರ ನಡೆದ ಅನಿರೀಕ್ಷಿತ ತಾಂತ್ರಿಕ ದೋಷವೊಂದು ಆಗಸದಲ್ಲಿ ಭಾರಿ ಗೊಂದಲಕ್ಕೆ ಕಾರಣವಾಯಿತು. ಸಂವಹನ ಜಾಲದ ವೈಫಲ್ಯದಿಂದಾಗಿ ದೇಶಾದ್ಯಂತ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಈ ಆತಂಕದ ಕ್ಷಣದಲ್ಲಿ, ತನ್ನ ಮೊದಲ ಏಕಾಂಗಿ ದೂರದ ಪ್ರಯಾಣದಲ್ಲಿದ್ದ ವಿದ್ಯಾರ್ಥಿ ಪೈಲಟ್ ಒಬ್ಬರು ಆಗಸದ ಮಧ್ಯೆ ಸಿಲುಕಿ ಕಂಗಾಲಾದ ರೋಚಕ ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ.

ಟೆಕ್ಸಾಸ್‌ನ ಫೋರ್ಟ್ ವರ್ತ್ ಬಳಿಯ ಹಿಕ್ಸ್ ಏರ್‌ಫೀಲ್ಡ್‌ನಿಂದ ಟೇಕಾಫ್ ಆಗಿದ್ದ ತರಬೇತಿ ಪೈಲಟ್, ಕಾಕ್‌ಪಿಟ್‌ನಲ್ಲಿ ಒಬ್ಬರೇ ಇದ್ದರು. ಇದೇ ವೇಳೆ ವಾಯು ಸಂಚಾರ ನಿಯಂತ್ರಣಾಧಿಕಾರಿ ಕಡೆಯಿಂದ ಅನಿರೀಕ್ಷಿತ ಸಂದೇಶವೊಂದು ಬಂತು. ದೇಶಾದ್ಯಂತ ವಿಮಾನ ಹಾರಾಟಕ್ಕೆ ತಡೆ ಹೇರಲಾಗಿದ್ದು, ತಕ್ಷಣವೇ ವಿಮಾನವನ್ನು ಕೆಳಗಿಳಿಸುವಂತೆ ಸೂಚಿಸಲಾಯಿತು. ಈ ಅನಿರೀಕ್ಷಿತ ಆದೇಶದಿಂದ ಗಾಬರಿಗೊಂಡ ಯುವ ಪೈಲಟ್, “ಮೇಡಂ, ನಾನಿನ್ನೂ ವಿದ್ಯಾರ್ಥಿ ಪೈಲಟ್. ನಿಜ ಹೇಳಬೇಕೆಂದರೆ, ಇದು ನನ್ನ ಮೊದಲ ಏಕಾಂಗಿ ದೂರದ ಹಾರಾಟ. ನನಗೇನು ಮಾಡಬೇಕೆಂದು ತೋಚುತ್ತಿಲ್ಲ,” ಎಂದು ಆತಂಕದಿಂದ ನುಡಿದರು.

ಪೈಲಟ್‌ನ ಗಾಬರಿಯನ್ನು ಅರಿತ ಮಹಿಳಾ ನಿಯಂತ್ರಕಿ, ಅತ್ಯಂತ ಸಮಾಧಾನದಿಂದ ಅವರಿಗೆ ಧೈರ್ಯ ತುಂಬಿದರು. ಆಗಸದಲ್ಲಿ ಸುತ್ತಮುತ್ತ ಹಾರಾಡುತ್ತಿದ್ದ ಎರಡು ಹೆಲಿಕಾಪ್ಟರ್‌ಗಳು ಹಾಗೂ ಇತರ ವಿಮಾನಗಳ ನಡುವೆ ಸುರಕ್ಷಿತವಾಗಿ ದಾರಿ ತೋರಿಸುತ್ತಾ, ನಿಲ್ದಾಣದತ್ತ ಮರಳಲು ಮಾರ್ಗದರ್ಶನ ನೀಡಿದರು. ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಂತೆ, “ಹಿಕ್ಸ್ ನಿಲ್ದಾಣದಲ್ಲಿ ಏನಾದರೂ ತೊಂದರೆಯಾಗಿದೆಯೇ?” ಎಂದು ಪೈಲಟ್ ಮತ್ತೆ ಆತಂಕದಿಂದ ಪ್ರಶ್ನಿಸಿದರು. ಅದಕ್ಕೆ ನಿಯಂತ್ರಕಿ, “ಅಲ್ಲಿ ಯಾವುದೇ ತೊಂದರೆಯಿಲ್ಲ, ನಿಶ್ಚಿಂತೆಯಿಂದ ಇಳಿಯಿರಿ,” ಎಂದು ಭರವಸೆ ನೀಡಿ ವಿಮಾನವನ್ನು ಸುರಕ್ಷಿತವಾಗಿ ನೆಲಕ್ಕಿಳಿಸಲು ನೆರವಾದರು.

ಶುಕ್ರವಾರ ಮಧ್ಯಾಹ್ನ ಈ ತಾಂತ್ರಿಕ ದೋಷ ಕಾಣಿಸಿಕೊಂಡಾಗ ಸುಮಾರು 4,000 ವಿಮಾನಗಳು ಅಮೆರಿಕದ ಆಗಸದಲ್ಲಿದ್ದವು. ರೇಡಾರ್ ಮತ್ತು ಸಂವಹನ ವ್ಯವಸ್ಥೆ ಭಾಗಶಃ ಸ್ಥಗಿತಗೊಂಡಿದ್ದರೂ, ನಿಯಂತ್ರಕರ ಚಾಣಾಕ್ಷತನದಿಂದ ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿವೆ. 2001ರ ಸೆಪ್ಟೆಂಬರ್ 11ರ ದಾಳಿ ಹಾಗೂ 2023ರ ಜನವರಿಯ ಕಂಪ್ಯೂಟರ್ ದೋಷದ ನಂತರ ಅಮೆರಿಕ ಕಂಡ ಅತಿದೊಡ್ಡ ವಾಯುಯಾನ ಸ್ಥಗಿತ ಇದಾಗಿದೆ. ಭಾನುವಾರ ಸಂಜೆಯ ವೇಳೆಗೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ.

Must Read

Skip to toolbar