November 15, 2026
Sunday, November 15, 2026
spot_img

ಚೀನಾ ಗಡಿ ಈಗ ‘ಹೆಚ್ಚು ಸಕ್ರಿಯವಾಗಿದೆ’: ಮೂಲಸೌಕರ್ಯ, ಸೇನಾ ಸಾಮರ್ಥ್ಯವನ್ನು ಬಲಪಡಿಸಲಾಗಿದೆ: ಎಸ್.ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾದೊಂದಿಗಿನ ಭಾರತದ ಗಡಿಯು ಈಗ ಹಿಂದೆಂದಿಗಿಂತಲೂ ‘ಹೆಚ್ಚು ಸಕ್ರಿಯ’ ಆಗಿದ್ದು, ನಿರಂತರವಾಗಿ ಹೆಚ್ಚಿನ ಸಂಖ್ಯೆಯ ಸೇನಾಪಡೆಗಳ ನಿಯೋಜನೆಯ ಅಗತ್ಯವಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. 2020ರ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯ ಸಂಘರ್ಷದ ನಂತರ, ವಾಸ್ತವ ಗಡಿ ರೇಖೆಯ ಉದ್ದಕ್ಕೂ ಭಾರತ ತನ್ನ ಸೇನಾ ಸಾಮರ್ಥ್ಯ ಹಾಗೂ ಮೂಲಸೌಕರ್ಯವನ್ನು ಗಣನೀಯವಾಗಿ ಬಲಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಗಡಿ ಮೂಲಸೌಕರ್ಯಕ್ಕೆ ಹೊಸ ವೇಗ

ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, ಗಡಿ ಭಾಗದಲ್ಲಿ ಭಾರತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. “ಕಳೆದ ಕೆಲವು ವರ್ಷಗಳ ಬೆಳವಣಿಗೆಗಳನ್ನು ಗಮನಿಸಿ. ಇಂದು ಹೊಸ ಸುರಂಗ ನಿರ್ಮಾಣವಾಗಿದೆ, ಹೊಸ ಸೇತುವೆ ಉದ್ಘಾಟನೆಯಾಗಿದೆ, ಮತ್ತೊಂದು ವಾಯುನೆಲೆ ಕಾರ್ಯಾರಂಭ ಮಾಡಿದೆ ಎಂಬ ಸುದ್ದಿಗಳು ಪದೇ ಪದೇ ಕೇಳಿಬರುತ್ತಿವೆ. ಸುಮಾರು ಒಂದು ದಶಕದ ಹಿಂದಿನವರೆಗೂ ಗಡಿ ಮೂಲಸೌಕರ್ಯಗಳನ್ನು ನಿರ್ಲಕ್ಷಿಸಲಾಗಿತ್ತು. ಕೇವಲ ಯೋಜನೆಗಳನ್ನು ರೂಪಿಸಲಾಗುತ್ತಿತ್ತೇ ಹೊರತು ಕಾರ್ಯಗತಗೊಳಿಸುತ್ತಿರಲಿಲ್ಲ. ಆದರೆ ಇಂದು ಗಡಿಯಲ್ಲಿ ಸೇನೆಯನ್ನು ತ್ವರಿತವಾಗಿ ನಿಯೋಜಿಸುವ ಭಾರತದ ಸಾಮರ್ಥ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ:

ಭಾರತ-ಚೀನಾ ಸಂಬಂಧ

ಪೂರ್ವ ಲಡಾಖ್‌ನಲ್ಲಿ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ನಡೆದ ಸೇನಾ ಬಿಕ್ಕಟ್ಟಿನ ನಂತರ, 2024ರ ಅಕ್ಟೋಬರ್‌ನಲ್ಲಿ ರಷ್ಯಾದ ಕಜಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಭೇಟಿಯ ಬಳಿಕ ಉಭಯ ದೇಶಗಳ ಸಂಬಂಧ ಸುಧಾರಣೆಯ ಹಾದಿಗೆ ಮರಳಿದೆ.

ಇದೇ ವೇಳೆ, ಭಾರತ ಮತ್ತು ಚೀನಾ ನಡುವಿನ ಆರ್ಥಿಕ ಅಸಮಾನತೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, “1988ರಲ್ಲಿ ರಾಜೀವ್ ಗಾಂಧಿ ಅವರು ಚೀನಾಕ್ಕೆ ಭೇಟಿ ನೀಡಿದ್ದಾಗ, ಭಾರತ ಮತ್ತು ಚೀನಾದ ಆರ್ಥಿಕತೆಗಳು ಸರಿಸುಮಾರು ಒಂದೇ ಗಾತ್ರದಲ್ಲಿದ್ದವು. ಆದರೆ 1980ರ ದಶಕದಲ್ಲಿ ಚೀನಾ ಆಧುನೀಕರಣ ಮತ್ತು ಕೈಗಾರಿಕೀಕರಣಕ್ಕೆ ದೊಡ್ಡ ಮಟ್ಟದ ಒತ್ತು ನೀಡಿತು. ಆ ಸಮಯದಲ್ಲಿ ಭಾರತ ಆ ಅವಕಾಶವನ್ನು ಕಳೆದುಕೊಂಡಿತು. 1990ರ ದಶಕದಲ್ಲಿ ನಾವು ಕೆಲವು ಆರ್ಥಿಕ ಸುಧಾರಣೆಗಳನ್ನು ತಂದರೂ, ಅವುಗಳನ್ನು ವಲಯವಾರು ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾದೆವು” ಎಂದು ವಿಶ್ಲೇಷಿಸಿದರು. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬೇಡಿ ಎಂದ ಅವರು, ಪ್ರಸ್ತುತ ಮೋದಿ ಸರ್ಕಾರವು ಉತ್ಪಾದನೆ ಮತ್ತು ಕೈಗಾರಿಕೀಕರಣಕ್ಕೆ ನೀಡುತ್ತಿರುವ ಆದ್ಯತೆಗಳನ್ನು ವಿವರಿಸಿದರು.

Must Read

Skip to toolbar