ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ! ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಮುಂದಿನ ಹತ್ತು ವರ್ಷಗಳ ಕಾಲ ತನ್ನ ಸಾಂಪ್ರದಾಯಿಕ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲೇ ನಡೆಯುವುದು ಅಧಿಕೃತವಾಗಿ ಖಚಿತವಾಗಿದೆ.
ಇತ್ತೀಚೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಂಡಳಿಯ ಸಭೆಯಲ್ಲಿ 2028ರಿಂದ 2035ರವರೆಗಿನ ಮಹತ್ವದ ಕ್ರಿಕೆಟ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಐಪಿಎಲ್ ಹಬ್ಬಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗಿದೆ.
ಐಸಿಸಿ ಬಿಡುಗಡೆ ಮಾಡಿರುವ ಹೊಸ ವೇಳಾಪಟ್ಟಿಯ ಪ್ರಕಾರ, 2028ರಿಂದ 2035ರವರೆಗಿನ ಎಲ್ಲಾ ಪ್ರಮುಖ ಪುರುಷರ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಜೂನ್ನಿಂದ ನವೆಂಬರ್ ತಿಂಗಳ ನಡುವೆ ಆಯೋಜಿಸಲಾಗಿದೆ. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯಂತಹ ಬೃಹತ್ ಟೂರ್ನಿಗಳನ್ನು ಜುಲೈ-ಆಗಸ್ಟ್ ಅಥವಾ ಅಕ್ಟೋಬರ್-ನವೆಂಬರ್ ಅವಧಿಗೆ ನಿಗದಿಪಡಿಸಲಾಗಿದೆ. ಅಲ್ಲದೆ, ಪ್ರತಿ ಎರಡು ವರ್ಷಗಳಿಗೊಮ್ಮೆ (2029, 2031, 2033 ಮತ್ತು 2035) ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಗಳನ್ನು ಜೂನ್ ತಿಂಗಳಿಗೆ ನಿಗದಿ ಮಾಡಲಾಗಿದೆ. ಮೇ ತಿಂಗಳ ಅಂತ್ಯಕ್ಕೆ ಐಪಿಎಲ್ ಮುಗಿಯುವುದರಿಂದ, ಆಟಗಾರರಿಗೆ ಹಾಗೂ ಐಪಿಎಲ್ ಟೂರ್ನಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಇತ್ತೀಚೆಗಷ್ಟೇ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕಿ ಜೂಹಿ ಚಾವ್ಲಾ ಅವರು ಬೇಸಿಗೆಯ ವಿಪರೀತ ಬಿಸಿಲಿನ ಕಾರಣ ನೀಡಿ, ಐಪಿಎಲ್ ಪಂದ್ಯಗಳನ್ನು ಜನವರಿ ಅಥವಾ ಅಕ್ಟೋಬರ್ ತಿಂಗಳಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದರು.
ಆದರೆ, ಐಸಿಸಿಯ ಈ ಹೊಸ ನಿರ್ಧಾರದಿಂದಾಗಿ ಐಪಿಎಲ್ ಸಮಯ ಬದಲಾಗುತ್ತದೆ ಎಂಬ ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಬಿದ್ದಿದೆ. ಮುಂದಿನ ಒಂದು ದಶಕದ ಕಾಲ ಬೇಸಿಗೆಯ ರಜೆಯ ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್ ಮನರಂಜನೆ ಅಬಾಧಿತವಾಗಿ ಸಿಗಲಿದ್ದು, ವಿಶ್ವ ಕ್ರಿಕೆಟ್ನಲ್ಲಿ ಐಪಿಎಲ್ನ ಪ್ರಾಬಲ್ಯ ಮತ್ತೊಮ್ಮೆ ಸಾಬೀತಾಗಿದೆ.



