November 16, 2026
Monday, November 16, 2026
spot_img

ಇಂಡೋ-ಪೆಸಿಫಿಕ್‌ನಲ್ಲಿ ಭಾರತದ ರಾಜತಾಂತ್ರಿಕ ಹೆಜ್ಜೆ: ಫಿಲಿಪ್ಪೀನ್ಸ್‌ಗೆ ಬಂದಿಳಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದ ಶಾಂತಿ, ಭದ್ರತೆ ಮತ್ತು ಆರ್ಥಿಕ ಸಹಕಾರದ ಕುರಿತು ಚರ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಫಿಲಿಪ್ಪೀನ್ಸ್‌ಗೆ ಭೇಟಿ ನೀಡಿದ್ದಾರೆ.

ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ತೆರಳಿರುವ ಮೋದಿ, ಮಂಗಳವಾರ ನಡೆಯಲಿರುವ 23ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಎರಡೂ ಸಭೆಗಳು ಭಾರತದ ಪ್ರಾದೇಶಿಕ ರಾಜತಾಂತ್ರಿಕ ಸಂಬಂಧಗಳಿಗೆ ಮಹತ್ವದ ವೇದಿಕೆಯಾಗಿವೆ.

ಏನಿದು ಮಹಾಸಾಗರ?

ಪ್ರಯಾಣಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಆಸಿಯಾನ್ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧವು ‘ಆಕ್ಟ್ ಈಸ್ಟ್’ ನೀತಿಯ ಪ್ರಮುಖ ಆಧಾರವಾಗಿದ್ದು, ‘ಮಹಾಸಾಗರ’ (MAHASAGAR) ದೃಷ್ಟಿಕೋನದಲ್ಲಿಯೂ ಕೇಂದ್ರ ಸ್ಥಾನ ಹೊಂದಿದೆ ಎಂದು ತಿಳಿಸಿದ್ದಾರೆ. ಮಹಾಸಾಗರ ಎಂದರೆ ವಿವಿಧ ಪ್ರದೇಶಗಳ ನಡುವೆ ಭದ್ರತೆ ಮತ್ತು ಬೆಳವಣಿಗೆಯ ಸಮಗ್ರ ಪ್ರಗತಿ ಎಂಬ ಅರ್ಥವನ್ನು ಒಳಗೊಂಡಿದೆ.

ಇದನ್ನೂ ಓದಿ:

ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಸಾಧಿಸಿರುವ ಪ್ರಗತಿಯನ್ನು ಮುಂದುವರಿಸುವುದು, ಸಂಪರ್ಕ ವ್ಯವಸ್ಥೆ, ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಗೆ ಹೊಸ ವೇಗ ನೀಡುವುದು ತಮ್ಮ ಆಶಯ ಎಂದು ಮೋದಿ ಹೇಳಿದ್ದಾರೆ.

ಆಸಿಯಾನ್

ಆಸಿಯಾನ್ (ASEAN) 1967ರಲ್ಲಿ ಸ್ಥಾಪನೆಯಾದ ಪ್ರಾದೇಶಿಕ ಸಂಘಟನೆಯಾಗಿದ್ದು, ಬ್ರೂನೈ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್, ಟಿಮೋರ್-ಲೆಸ್ಟೆ ಮತ್ತು ವಿಯೆಟ್ನಾಂ ಸೇರಿದಂತೆ 11 ರಾಷ್ಟ್ರಗಳು ಇದರ ಸದಸ್ಯರಾಗಿವೆ. ಭಾರತವು ಆಸಿಯಾನ್‌ನ ಸಂವಾದ ಪಾಲುದಾರ ರಾಷ್ಟ್ರವಾಗಿದ್ದು, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಹಾಗೂ ಪ್ರಾದೇಶಿಕ ಸಂಪರ್ಕ ಕ್ಷೇತ್ರಗಳಲ್ಲಿ ಸಹಕಾರ ಹೊಂದಿದೆ.

2026ನೇ ವರ್ಷವನ್ನು ಭಾರತ-ಆಸಿಯಾನ್ ಸಮುದ್ರ ಸಹಕಾರದ ವರ್ಷವನ್ನಾಗಿ ಆಚರಿಸಲಾಗುತ್ತಿರುವುದು ಈ ಭೇಟಿಗೆ ಮತ್ತಷ್ಟು ಮಹತ್ವ ನೀಡಿದೆ. ಕಡಲ ಭದ್ರತೆ, ವ್ಯಾಪಾರ ಸಂಪರ್ಕ ಹಾಗೂ ಸಾಗರ ವಲಯದ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಎರಡೂ ಕಡೆಯ ನಾಯಕರು ಚರ್ಚೆ ನಡೆಸುವ ನಿರೀಕ್ಷೆಯಿದೆ.

Must Read