ಹೊಸದಿಗಂತ ವರದಿ ಉಳ್ಳಾಲ:
ವಿದ್ಯಾರ್ಥಿಗಳಿಗೆ ವಿಭಿನ್ನ ಭಾಷೆ, ಸಂಸ್ಕೃತಿ ಹಾಗೂ ಸಾಮಾಜಿಕ ಹಿನ್ನೆಲೆಗಳ ಕಥನಗಳನ್ನು ಪರಿಚಯಿಸುವುದರ ಜೊತೆಗೆ ಸಾಂಸ್ಕೃತಿಕ ಅರಿವು ವಿಸ್ತರಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನವೆಂಬರ್ 17ರಿಂದ 21ರವರೆಗೆ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರ, ಎಸ್.ವಿ.ಪಿ. ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ವಿಭಾಗದ ಸಹಯೋಗದಲ್ಲಿ ಕೊಣಾಜೆಯ ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಈ ಚಲನಚಿತ್ರೋತ್ಸವ ನಡೆಯಲಿದೆ.
ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಚಲನಚಿತ್ರೋತ್ಸವವನ್ನು ನವೆಂಬರ್ 17ರಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ಬಳಿಕ ಅವರೊಂದಿಗೆ ಮುಕ್ತ ಸಂವಾದ ನಡೆಯಲಿದ್ದು, ಮಧ್ಯಾಹ್ನ ಅವರು ನಿರ್ದೇಶಿಸಿರುವ ಜನಪ್ರಿಯ ಮಕ್ಕಳ ಚಿತ್ರ ‘ಚಿನ್ನಾರಿ ಮುತ್ತ’ ಪ್ರದರ್ಶನಗೊಳ್ಳಲಿದೆ. ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಐದು ದಿನಗಳ ಉತ್ಸವದಲ್ಲಿ ಪ್ರತಿದಿನ ವಿವಿಧ ಭಾರತೀಯ ಭಾಷೆಗಳ ಮಕ್ಕಳ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ನವೆಂಬರ್ 18ರಂದು ತುಳು ಚಲನಚಿತ್ರ ‘ಕೋಟಿ ಚೆನ್ನಯ’ ಪ್ರದರ್ಶನಗೊಳ್ಳಲಿದ್ದು, ಖ್ಯಾತ ನಾಟಕಕಾರ ಹಾಗೂ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ್ ಚಿತ್ರದ ಕುರಿತು ಮಾತನಾಡಲಿದ್ದಾರೆ.
ನವೆಂಬರ್ 19ರಂದು ತಮಿಳು ಚಲನಚಿತ್ರ ‘ಕಾಕಾ ಮುಟ್ಟೈ’ ಪ್ರದರ್ಶನಗೊಳ್ಳಲಿದ್ದು, ಲೇಖಕ ಹಾಗೂ ಚಲನಚಿತ್ರ ವಿಮರ್ಶಕ ಸಂವರ್ಥ ಸಾಹಿಲ್ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ನವೆಂಬರ್ 20ರಂದು ಇಂಗ್ಲಿಷ್ ಚಲನಚಿತ್ರ ‘ಡೆಡ್ ಪೊಯೆಟ್ಸ್ ಸೊಸೈಟಿ’ ಪ್ರದರ್ಶನಗೊಳ್ಳಲಿದ್ದು, ಮುನಿಯಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಝೈಬುನ್ನಿಸಾ ಅಬ್ದುಲ್ ರಝಾಕ್ ಹಮ್ಮಬ್ಬ ಚಿತ್ರದ ಕುರಿತು ಮಾತನಾಡಲಿದ್ದಾರೆ.
ನವೆಂಬರ್ 21ರಂದು ಬೆಳಿಗ್ಗೆ ಮಲಯಾಳಂ ಚಲನಚಿತ್ರ ‘ಕುಮ್ಮಟ್ಟಿ’ ಪ್ರದರ್ಶನಗೊಳ್ಳಲಿದ್ದು, ನಿಟ್ಟೆಯ ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಂಜೂಪ್ ಕೆ.ಪಿ ಚಿತ್ರದ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ ಹಿಂದಿ ಚಲನಚಿತ್ರ ‘ಎ ಬಿಲಿಯನ್ ಕಲರ್ ಸ್ಟೋರಿ’ ಪ್ರದರ್ಶನಗೊಳ್ಳಲಿದ್ದು, ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ವಿಷ್ಣುಮೂರ್ತಿ ಪ್ರಭು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ವಿವಿಧ ಭಾಷೆಗಳ ಚಲನಚಿತ್ರಗಳ ಪರಿಚಯದ ಮೂಲಕ ವಿದ್ಯಾರ್ಥಿಗಳಿಗೆ ಸಮಾಜ, ಸಂಸ್ಕೃತಿ, ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಈ ಚಲನಚಿತ್ರೋತ್ಸವ ಉತ್ತಮ ಅವಕಾಶ ಕಲ್ಪಿಸಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.



