November 17, 2026
Tuesday, November 17, 2026
spot_img

ಮನಿಲಾದಲ್ಲಿ ಆಸಿಯಾನ್ ಶೃಂಗಸಭೆ: ‘ಪೈಪೋಟಿಗಿಂತ ಸಹಕಾರ ಮುಖ್ಯ’ ಎಂದು ಕರೆ ನೀಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಕೆಲವು ವರ್ಷಗಳಿಂದ ಜಗತ್ತು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದು, ಇಂದು ವಿಶ್ವಕ್ಕೆ ಅತ್ಯಂತ ತುರ್ತಾಗಿ ಬೇಕಿರುವುದು “ಶಾಂತಿ, ಸ್ಥಿರತೆ ಮತ್ತು ಭರವಸೆ” ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಇಂದು ನಡೆದ 23ನೇ ಭಾರತ-ಆಸಿಯಾನ್ (ASEAN) ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಭವಿಷ್ಯವು ಪರಸ್ಪರ ಪೈಪೋಟಿಯಿಂದಲ್ಲ, ಬದಲಾಗಿ ಸಹಕಾರದಿಂದ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

‘ವಿಕಸಿತ ಭಾರತ 2047’ ಮತ್ತು ಆಸಿಯಾನ್ ದೃಷ್ಟಿಕೋನ

ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಒಟ್ಟಾಗಿ ಜಗತ್ತಿನ ಒಟ್ಟು ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟಿವೆ. ನಮಗೆ ಸಾಮರ್ಥ್ಯ ಮತ್ತು ದೃಢ ಸಂಕಲ್ಪ ಎರಡೂ ಇದ್ದು, ಒಗ್ಗೂಡಿ ಕೆಲಸ ಮಾಡಿದರೆ ಈ ಇಡೀ ಪ್ರದೇಶವನ್ನು ಶಾಂತಿ ಮತ್ತು ಸ್ಥಿರತೆಯ ಸಂಕೇತವನ್ನಾಗಿ ಮಾಡಬಹುದು ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಭಾರತದ ಅಭಿವೃದ್ಧಿ ಮತ್ತು ಆಸಿಯಾನ್ ರಾಷ್ಟ್ರಗಳ ಸಮೃದ್ಧಿ ಒಂದಕ್ಕೊಂದು ಆಳವಾಗಿ ಬೆಸೆದುಕೊಂಡಿವೆ ಎಂದ ಪ್ರಧಾನಿ, ಮುಂಬರುವ ವರ್ಷಗಳಲ್ಲಿ ‘ಆಸಿಯಾನ್ ಕಮ್ಯುನಿಟಿ ವಿಷನ್ 2045’ ಮತ್ತು ‘ವಿಕಸಿತ ಭಾರತ 2047’ ಗುರಿಗಳು ನಮ್ಮೆಲ್ಲರ ಆಶಯಗಳನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದರು.

ಡಿಜಿಟಲ್, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

ಭಾರತದ ‘ಆಕ್ಟ್ ಈಸ್ಟ್ ಪಾಲಿಸಿ’ ಕಳೆದೊಂದು ದಶಕದಲ್ಲಿ ಭಾರತ-ಆಸಿಯಾನ್ ಸಂಬಂಧಗಳಿಗೆ ಹೊಸ ವೇಗ ನೀಡಿದೆ. ನಮ್ಮ ಪಾಲುದಾರಿಕೆಯು ಕೇವಲ ಸಂಸ್ಕೃತಿ ಮತ್ತು ಪರಂಪರೆಗೆ ಸೀಮಿತವಾಗದೆ, ಡಿಜಿಟಲ್, ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಆಧುನಿಕ ಕ್ಷೇತ್ರಗಳಿಗೂ ವಿಸ್ತರಿಸಿದೆ.

2014ರಿಂದ ಜನರ ನಡುವಿನ ಬಾಂಧವ್ಯ ವೃದ್ಧಿಸಲು 100ಕ್ಕೂ ಹೆಚ್ಚು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಸುಮಾರು 250 ಕ್ಷಿಪ್ರ ಪರಿಣಾಮದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕೌಶಲ್ಯಾಭಿವೃದ್ಧಿಗಾಗಿ 10,000ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ನೀಡಲಾಗಿದೆ. ಭಾರತ ಮತ್ತು ಒಂಬತ್ತು ಆಸಿಯಾನ್ ರಾಷ್ಟ್ರಗಳ ನಡುವಿನ ನೇರ ವಿಮಾನಯಾನ ಹಾಗೂ ಪ್ರವಾಸೋದ್ಯಮ ಬೆಳವಣಿಗೆಯು ನಮ್ಮ ಆತ್ಮೀಯ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ಮೋದಿ ವಿವರಿಸಿದರು.

ಇದನ್ನೂ ಓದಿ:

ಇಂಡೋ-ಪೆಸಿಫಿಕ್ ಸ್ಥಿರತೆಗೆ ಭಾರತದ ಬೆಂಬಲ

2026ರ ಆಸಿಯಾನ್ ಅಧ್ಯಕ್ಷತೆ ವಹಿಸಿರುವ ಫಿಲಿಪೈನ್ಸ್‌ನ ‘ನ್ಯಾವಿಗೇಟಿಂಗ್ ಅವರ್ ಫ್ಯೂಚರ್ ಟುಗೆದರ್’ ಎಂಬ ಥೀಮ್ ಇಂದಿನ ಪರಿಸ್ಥಿತಿಗೆ ಅತ್ಯಂತ ಸೂಕ್ತವಾಗಿದೆ. ಆಸಿಯಾನ್ ಒಗ್ಗಟ್ಟಿಗೆ ಭಾರತದ ಬೆಂಬಲ ಸದಾ ಅಚಲವಾಗಿರಲಿದ್ದು, ಈ ಸಭೆಯು ಸುರಕ್ಷಿತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ನಿರ್ಮಾಣಕ್ಕೆ ಕೊಡುಗೆ ನೀಡಲಿದೆ ಎಂದು ಮೋದಿ ಹೇಳಿದರು.

2026ನೇ ವರ್ಷವನ್ನು ‘ಭಾರತ-ಆಸಿಯಾನ್ ಕಡಲ ಸಹಕಾರ ವರ್ಷ’ವನ್ನಾಗಿ ಆಚರಿಸಲಾಗುತ್ತಿದ್ದು, 2027ರಲ್ಲಿ ಉಭಯ ಬಾಂಧವ್ಯದ 35ನೇ ವಾರ್ಷಿಕೋತ್ಸವ ನಡೆಯಲಿದೆ. ಇದೇ ದಿನ ಸಂಜೆ ಪ್ರಧಾನಿ ಮೋದಿ ಅವರು 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲೂ (EAS) ಭಾಗವಹಿಸಿ ಜಾಗತಿಕ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.

Must Read

Skip to toolbar