November 19, 2026
Thursday, November 19, 2026
spot_img

ಯಾವುದೇ ದಾಖಲೆಗಳಿಲ್ಲದೇ ದೆಹಲಿ ಏರ್‌ಪೋರ್ಟ್‌ಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಸ್ಥಳದಲ್ಲೇ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ ಮೂರಕ್ಕೆ ಯಾವುದೇ ದಾಖಲೆಗಳಿಲ್ಲದ ವ್ಯಕ್ತಿಯೊಬ್ಬ ಏಕಾಏಕಿ ನುಗ್ಗಲು ಯತ್ನಿಸಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ತದನಂತರ ಕೈಗಾರಿಕಾ ಭದ್ರತಾ ಸಿಬ್ಬಂದಿ ಪಡೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಂಭಾವ್ಯ ಭದ್ರತಾ ಉಲ್ಲಂಘನೆ ತಪ್ಪಿದೆ ಎಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಿಐಎಸ್​ಎಫ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪ್ರವೇಶ ದ್ವಾರದ ಮೂಲಕ ಬಲವಂತವಾಗಿ ಟರ್ಮಿನಲ್ ಒಳಗೆ ನುಗ್ಗಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.

ಬಂಧಿತ ವ್ಯಕ್ತಿಯು ಬ್ಯಾಗ್‌ಪ್ಯಾಕ್‌ ಒಂದನ್ನು ಹಾಕಿಕೊಂಡಿದ್ದ. ಅದರಲ್ಲಿದ್ದ ಕೆಲ ದಾಖಲೆಗಳ ಪ್ರಕಾರ ಆತ ಹರಿಯಾಣ ಮೂಲದವನು ಎನ್ನುವ ಮಾಹಿತಿ ಲಭ್ಯವಾಗಿದೆ. ವಿಚಾರಣೆಗಾಗಿ ಆತನನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಆತ ನುಗ್ಗಿದ್ದು ಏಕೆ ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಏರ್‌ಪೋರ್ಟ್‌ ಮುಖ್ಯದ್ವಾರದಲ್ಲಿ ಏಕಾಏಕಿ ನುಗ್ಗಿದ ಆತನನ್ನು ಸಿಐಎಸ್‌ಎಫ್‌ ಸಿಬ್ಬಂದಿ ತಡೆದಿದ್ದಾರೆ. ಆತ ತಪ್ಪಿಸಿಕೊಂಡು ಓಡಿದ್ದಾನೆ. ನಂತರ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಆತನನ್ನು ಸೆಕೆಂಡುಗಳಲ್ಲಿ ಹಿಡಿದುಹಾಕಿದೆ.

ದೆಹಲಿ ವಿಮಾನ ನಿಲ್ದಾಣದಂತಹ ಅತಿ ಸೂಕ್ಷ್ಮ ಭದ್ರತಾ ಪ್ರದೇಶಗಳಲ್ಲಿ ಪ್ರಯಾಣಿಕರು ಟರ್ಮಿನಲ್ ಪ್ರವೇಶಿಸಲು ಮಾನ್ಯ ಟಿಕೆಟ್ ಅಥವಾ ಬೋರ್ಡಿಂಗ್ ಪಾಸ್ ಹಾಗೂ ಅಗತ್ಯ ಗುರುತಿನ ದಾಖಲೆಗಳನ್ನು ತೋರಿಸಬೇಕು. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ಪ್ರದರ್ಶಿಸಬೇಕು. ಪ್ರವೇಶ ದ್ವಾರದಲ್ಲಿಯೇ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪ್ರಯಾಣಿಕರಿಗೆ ಒಳಗೆ ಹೋಗಲು ಅನುಮತಿ ನೀಡಲಾಗುತ್ತದೆ. ಈ ವ್ಯವಸ್ಥೆಯ ಉದ್ದೇಶ ಅನಧಿಕೃತ ವ್ಯಕ್ತಿಗಳು ವಿಮಾನ ನಿಲ್ದಾಣದ ಭದ್ರತಾ ಪ್ರದೇಶ ಪ್ರವೇಶಿಸುವುದನ್ನು ತಡೆಯುವುದಾಗಿದೆ.

Must Read