November 19, 2026
Thursday, November 19, 2026
spot_img

ಗಲ್ಲಾಪೆಟ್ಟಿಗೆಯಲ್ಲಿ ರಾಮ-ರಾವಣರ ಅಬ್ಬರ: ‘ಧುರಂಧರ್’ ಲೈಫ್‌ಟೈಮ್ ಕಲೆಕ್ಷನ್ ಮೀರಿಸಿದ ‘ರಾಮಾಯಣ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಪೌರಾಣಿಕ ದೃಶ್ಯಕಾವ್ಯ ‘ರಾಮಾಯಣ’ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು 840 ಕೋಟಿ ರೂಪಾಯಿಗಳ ಗಡಿ ದಾಟುವ ಮೂಲಕ, ‘ಧುರಂಧರ್’ ಚಿತ್ರದ ಒಟ್ಟಾರೆ ಭಾರತೀಯ ಗಳಿಕೆಯ ದಾಖಲೆಯನ್ನು ಹಿಂದಿಕ್ಕಿದೆ.

ಎರಡನೇ ವಾರದಲ್ಲಿ ದೈನಂದಿನ ಗಳಿಕೆಯಲ್ಲಿ ತುಸು ಇಳಿಕೆ ಕಂಡುಬಂದರೂ, ‘ರಾಮಾಯಣ’ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಬಿಡುಗಡೆಯಾದ 14ನೇ ದಿನದಂದು ದೇಶಾದ್ಯಂತ 21,215 ಪ್ರದರ್ಶನಗಳಿಂದ ಈ ಚಿತ್ರ 23.20 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ 844.40 ಕೋಟಿ ರೂಪಾಯಿಗೆ ತಲುಪಿದೆ. ವಿಶೇಷವೆಂದರೆ, ಕಳೆದ ಮಾರ್ಚ್ 19ರಂದು ಬಿಡುಗಡೆಯಾಗಿದ್ದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ ದಿ ರಿವೆಂಜ್’ ಚಿತ್ರ 14ನೇ ದಿನ 20.10 ಕೋಟಿ ರೂಪಾಯಿ ಗಳಿಸಿ, ಮೊದಲ ಎರಡು ವಾರಗಳಲ್ಲಿ ಒಟ್ಟು 919.52 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಚಿತ್ರದ ಅಭೂತಪೂರ್ವ ಯಶಸ್ಸಿನ ಕುರಿತು ಮಾತನಾಡಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ, “ಭಾರತದಲ್ಲಿ ಈಗಾಗಲೇ ಅನೇಕ ರಾಮಾಯಣಗಳು ಬಂದಿವೆ, ಕಥೆ ನಮಗೆ ಗೊತ್ತಿದೆ, ಮತ್ತೆ ಏಕೆ ಸಿನಿಮಾ ಮಾಡುತ್ತಿದ್ದೀರಿ ಎಂದು ಹಲವರು ಪ್ರಶ್ನಿಸಿದ್ದರು. ಆದರೆ, ಹಿಂದೆಂದೂ ಯಾವುದೇ ಟಿವಿ ಧಾರಾವಾಹಿ, ಬೀದಿ ನಾಟಕ ಅಥವಾ ರಾಮಲೀಲಾದಲ್ಲಿ ನೋಡಿರದಷ್ಟು ಬೃಹತ್ ಮಟ್ಟದಲ್ಲಿ ಮತ್ತು ಅದ್ಧೂರಿತನದಲ್ಲಿ ಈ ಕಥೆಯನ್ನು ತೋರಿಸುವುದೇ ನಮ್ಮ ಉದ್ದೇಶವಾಗಿತ್ತು” ಎಂದು ಹೇಳಿದ್ದಾರೆ.

ಚಿತ್ರದ ಜಾಗತಿಕ ಗುರಿಯ ಬಗ್ಗೆ ವಿವರಿಸಿದ ಮಲ್ಹೋತ್ರಾ, “ಪಾಶ್ಚಿಮಾತ್ಯ ಪ್ರೇಕ್ಷಕರಿಗೆ ಬೃಹತ್ ದೃಶ್ಯವೈಭವವಿರುವ ಸಿನಿಮಾಗಳೆಂದರೆ ಬಹಳ ಇಷ್ಟ. ಭಾರತದಲ್ಲಿ ‘ಬಾಹುಬಲಿ’, ‘ಧುರಂಧರ್’ ನಂತಹ ಅದ್ಭುತ ಸೂಪರ್ ಹಿಟ್ ಸಿನಿಮಾಗಳು ಬಂದಿದ್ದರೂ, ಅವು ಹಾಲಿವುಡ್ ಶೈಲಿಯ ದೃಶ್ಯವೈಭವ ಹೊಂದಿರಲಿಲ್ಲ. ‘ಅವತಾರ್’, ‘ಅವೆಂಜರ್ಸ್’, ‘ಸ್ಪೈಡರ್-ಮ್ಯಾನ್’ ಅಥವಾ ‘ದಿ ಒಡಿಸ್ಸಿ’ ಸಿನಿಮಾಗಳ ಸಾಲಿಗೆ ನಮ್ಮ ‘ರಾಮಾಯಣ’ವನ್ನೂ ನಿಲ್ಲಿಸಿದ್ದೇವೆ. ಹಾಲಿವುಡ್ ಮಂದಿ ಮಾಡುವಷ್ಟೇ ದೊಡ್ಡ ಮಟ್ಟದ, ಅದಕ್ಕಿಂತಲೂ ಮಿಗಿಲಾದ ಸಿನಿಮಾಗಳನ್ನು ಭಾರತೀಯರೂ ಮಾಡಬಲ್ಲರು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ” ಎಂದು ಹೆಮ್ಮೆಯಿಂದ ನುಡಿದಿದ್ದಾರೆ.

Must Read

Skip to toolbar