November 19, 2026
Thursday, November 19, 2026
spot_img

ಸತತ ಸೇವೆಗೂ ಸಿಗದ ಸ್ಥಾನ: ಸಿರಾಜ್-ಜಡೇಜಾ ಹೊರಗಿಟ್ಟ ನಿರ್ಧಾರಕ್ಕೆ ಕ್ರಿಕೆಟ್ ಲೋಕ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆಡುವ ಬಳಗದಿಂದ ಸ್ಟಾರ್ ಆಟಗಾರರಾದ ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರನ್ನು ಕೈಬಿಡುವ ಮೂಲಕ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ದೊಡ್ಡ ಅಚ್ಚರಿ ಮೂಡಿಸಿದೆ. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಶುಭ್​ಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಸಿರು ಪಿಚ್‌ನ ಲಾಭ ಪಡೆಯಲು ನಾಲ್ವರು ವೇಗದ ಬೌಲರ್‌ಗಳು ಮತ್ತು ಒಬ್ಬ ಸ್ಪಿನ್ ಆಲ್‌ರೌಂಡರ್‌ನೊಂದಿಗೆ ಕಣಕ್ಕಿಳಿಯಲು ನಾಯಕ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ಒಂದು ವರ್ಷದ ಸುದೀರ್ಘ ಗಾಯದ ವಿರಾಮದ ನಂತರ ಟೆಸ್ಟ್ ತಂಡಕ್ಕೆ ಮರಳಿರುವ ಜಸ್​ಪ್ರೀತ್ ಬುಮ್ರಾ ಅವರೊಂದಿಗೆ ಆಕಾಶ್ ದೀಪ್, ಅನ್ಶುಲ್ ಕಂಬೋಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ನೀಡಲಾಗಿದೆ. ತಂಡದ ಎಲ್ಲಾ ವೇಗದ ಬೌಲರ್‌ಗಳು ಉತ್ತಮ ಫಾರ್ಮ್‌ನಲ್ಲಿರುವ ಕಾರಣ ಸಿರಾಜ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿತ್ತು ಎಂದು ಟಾಸ್ ವೇಳೆ ಗಿಲ್ ಸ್ಪಷ್ಟಪಡಿಸಿದ್ದಾರೆ. 2024ರ ಅಕ್ಟೋಬರ್ ನಂತರ ಸಿರಾಜ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುತ್ತಿರುವುದು ಇದೇ ಮೊದಲು. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಆಡಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಸಿರಾಜ್ ಅವರನ್ನು ಕೈಬಿಟ್ಟಿರುವುದು ಕ್ರೀಡಾ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಟೆಸ್ಟ್ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಅನುಭವಿ ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿದೆ. ನ್ಯೂಝಿಲೆಂಡ್ ತಂಡದ ಅಗ್ರ ಕ್ರಮಾಂಕದಲ್ಲಿ ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್ ಮತ್ತು ರಚಿನ್ ರವೀಂದ್ರ ಎಂಬ ನಾಲ್ವರು ಎಡಗೈ ಬ್ಯಾಟರ್‌ಗಳಿದ್ದಾರೆ. ಇವರ ವಿರುದ್ಧ ಆಫ್-ಸ್ಪಿನ್ನರ್ ಸುಂದರ್ ಹೆಚ್ಚು ಪರಿಣಾಮಕಾರಿಯಾಗಬಲ್ಲರು ಎಂಬುದು ತಂಡದ ಲೆಕ್ಕಾಚಾರವಾಗಿದೆ.

ವಿದೇಶಿ ಪಿಚ್‌ಗಳಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಸಿರಾಜ್ ಮತ್ತು ಜಡೇಜಾ ಅವರನ್ನು ಒಟ್ಟಿಗೆ ಕೈಬಿಟ್ಟಿರುವುದು ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೇರಿದಂತೆ ಹಲವರಲ್ಲಿ ಅಚ್ಚರಿ ಮೂಡಿಸಿದೆ. ಅನುಭವಕ್ಕಿಂತ ಪಿಚ್ ಮತ್ತು ಎದುರಾಳಿ ಬ್ಯಾಟರ್‌ಗಳ ದೌರ್ಬಲ್ಯಕ್ಕೆ ತಕ್ಕಂತೆ ತಂಡ ಕಟ್ಟಿರುವ ಗಿಲ್-ಗಂಭೀರ್ ಜೋಡಿಯ ಈ ಹೊಸ ರಣತಂತ್ರ ವೆಲ್ಲಿಂಗ್ಟನ್‌ನಲ್ಲಿ ಎಷ್ಟರಮಟ್ಟಿಗೆ ಕೈಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Must Read

Skip to toolbar