November 19, 2026
Thursday, November 19, 2026
spot_img

ಎಂ.ಕೆ. ಸ್ಟಾಲಿನ್ ಅವರನ್ನೇ ಸೋಲಿಸಿದ್ದ ಕೊಳತ್ತೂರು TVK ಶಾಸಕ ವಿ.ಎಸ್.ಬಾಬು ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ಕೊಳತ್ತೂರು ವಿಧಾನಸಭಾ ಕ್ಷೇತ್ರದ TVK ಶಾಸಕ ವಿ.ಎಸ್. ಬಾಬು ಅವರು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಗುರುವಾರ ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ ಶಾಸಕ

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಬು ಅವರನ್ನು 2026ರ ಸೆಪ್ಟೆಂಬರ್ 9ರಂದು ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿವಿಧ ತಜ್ಞ ವೈದ್ಯರ ತಂಡವು ನಿರಂತರ ಪ್ರಯತ್ನ ನಡೆಸಿದರೂ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಲೇ ಬಂದಿತ್ತು. ಆದ್ದರಿಂದ ಇಂದು ಮಧ್ಯಾಹ್ನ 2:24ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಸೇವೆಗಳ ನಿರ್ದೇಶಕರು ಅಧಿಕೃತವಾಗಿ ತಿಳಿಸಿದ್ದಾರೆ. ಅಗಲಿದ ನಾಯಕನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಆಸ್ಪತ್ರೆ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ.

ಸ್ಟಾಲಿನ್ ಭದ್ರಕೋಟೆ ಭೇದಿಸಿದ್ದ ನಾಯಕ

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸುವ ಮೂಲಕ ವಿ.ಎಸ್. ಬಾಬು ಗಮನ ಸೆಳೆದಿದ್ದರು. 2011ರಿಂದ ಸ್ಟಾಲಿನ್ ಅವರ ಭದ್ರಕೋಟೆಯಾಗಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಬಾಬು 82,997 ಮತಗಳನ್ನು ಪಡೆದರೆ, ಸ್ಟಾಲಿನ್ 74,202 ಮತಗಳನ್ನು ಪಡೆದಿದ್ದರು. ಈ ಮೂಲಕ 8,795 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದರು.

ರಾಜಕೀಯ ಹಿನ್ನೆಲೆ

ಟಿವಿಕೆ ಸೇರುವ ಮೊದಲು ವಿ.ಎಸ್. ಬಾಬು ಅವರು ಡಿಎಂಕೆ ಪಕ್ಷದಲ್ಲೇ ಗುರುತಿಸಿಕೊಂಡಿದ್ದರು. ಉತ್ತರ ಚೆನ್ನೈ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು, 2006ರ ವಿಧಾನಸಭಾ ಚುನಾವಣೆಯಲ್ಲಿ ಪುರಸೈವಾಕ್ಕಂ ಕ್ಷೇತ್ರದಿಂದ ಡಿಎಂಕೆ ಟಿಕೆಟ್‌ನಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮುಖ್ಯಮಂತ್ರಿ ಕಚೇರಿ ಸಂತಾಪ

ಕೊಳತ್ತೂರು ಶಾಸಕ ವಿ.ಎಸ್. ಬಾಬು ಅವರ ಅಕಾಲಿಕ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಕಚೇರಿ (CMO) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಿಎಂಒ, “ಅನಾರೋಗ್ಯದಿಂದ ಬಳಲುತ್ತಿದ್ದ ಕೊಲತ್ತೂರು ಕ್ಷೇತ್ರದ ಶಾಸಕ ವಿ.ಎಸ್. ಬಾಬು ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ತಮ್ಮನ್ನು ಸಂಪೂರ್ಣವಾಗಿ ಸಾರ್ವಜನಿಕ ಜೀವನಕ್ಕೆ ಸಮರ್ಪಿಸಿಕೊಂಡಿದ್ದ, ಜನಸಾಮಾನ್ಯರಲ್ಲಿ ಒಬ್ಬರಾಗಿ ಬದುಕಿ ಎಲ್ಲರ ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದ ಅವರ ಅಗಲಿಕೆ ತುಂಬಲಾರದ ನಷ್ಟ” ಎಂದು ತಿಳಿಸಿದೆ. ಅಲ್ಲದೆ, ಅವರ ಕುಟುಂಬಸ್ಥರು, ಟಿವಿಕೆ ಕಾರ್ಯಕರ್ತರು ಹಾಗೂ ಕೊಳತ್ತೂರು ಕ್ಷೇತ್ರದ ಜನತೆಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದೆ.

Must Read

Skip to toolbar