November 19, 2026
Thursday, November 19, 2026
spot_img

ಸಿಎಂ ಡಿಕೆಶಿ ಅಧಿಕೃತ ನಿವಾಸ ‘ಗಂಗಾ’ ಎದುರು ಪ್ರತಿಭಟನೆ: ಕಪ್ಪುಪಟ್ಟಿ ಪ್ರದರ್ಶಿಸಿ ವಾಟಾಳ್ ನಾಗರಾಜ್ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸ ‘ಗಂಗಾ’ದಲ್ಲಿ ಆಯೋಜಿಸಲಾಗಿದ್ದ ಭರ್ಜರಿ ಔತಣಕೂಟದ ವೇಳೆಯೇ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ದಿಢೀರ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಐತಿಹಾಸಿಕ ಕುಮಾರಕೃಪಾ (ಕೆಕೆ) ಅತಿಥಿ ಗೃಹದ ಹೆಸರನ್ನು ಬದಲಿಸಿ ನವೀಕರಣ ಮಾಡಿರುವುದನ್ನು ಖಂಡಿಸಿ, ನಿವಾಸದ ಎದುರೇ ಕಪ್ಪುಪಟ್ಟಿ ಪ್ರದರ್ಶಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಔತಣಕೂಟದ ನಡುವೆಯೇ ಪ್ರತಿಭಟನೆಯ ಕಾವು

ಕುಮಾರಕೃಪಾ ರಸ್ತೆಯಲ್ಲಿರುವ ‘ಗಂಗಾ’ ನಿವಾಸದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವರು, ಎಲ್ಲಾ ಪಕ್ಷಗಳ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಸುಮಾರು 500 ಗಣ್ಯರಿಗೆ ವಿಶೇಷ ಭೋಜನಕೂಟ ಏರ್ಪಡಿಸಿದ್ದರು. ಅತಿಥಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲೇ ಸ್ಥಳಕ್ಕೆ ಆಗಮಿಸಿದ ವಾಟಾಳ್ ನಾಗರಾಜ್, ಕೆಕೆ ಗೆಸ್ಟ್ ಹೌಸ್ ಮುಂಭಾಗ ಪ್ರತಿಭಟನೆಗೆ ಇಳಿದರು.

ಐತಿಹಾಸಿಕ ಹಿನ್ನೆಲೆ ಉಲ್ಲೇಖಿಸಿ ವಾಗ್ದಾಳಿ

ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, “ಕುಮಾರಕೃಪಾ ಅತಿಥಿ ಗೃಹಕ್ಕೆ ನೂರಾರು ವರ್ಷಗಳ ಭವ್ಯ ಇತಿಹಾಸವಿದೆ. ಮಹಾತ್ಮ ಗಾಂಧೀಜಿ, ದಲೈಲಾಮಾ ಅವರಂತಹ ಮಹನೀಯರು ಇಲ್ಲಿಗೆ ಭೇಟಿ ನೀಡಿದ್ದರು. ಇಷ್ಟು ವರ್ಷಗಳಲ್ಲಿ ಯಾರೊಬ್ಬರೂ ಇಲ್ಲಿನ ಒಂದು ಕಲ್ಲನ್ನೂ ಬದಲಾಯಿಸಿರಲಿಲ್ಲ. ಆದರೆ, ಈಗ ಡಿ.ಕೆ. ಶಿವಕುಮಾರ್ ಅವರು ಇದರ ಹೆಸರನ್ನು ಬದಲಾಯಿಸಿ ನವೀಕರಣ ಮಾಡಿರುವುದು ಸರಿಯಲ್ಲ,” ಎಂದು ಕಿಡಿಕಾರಿದರು.

ಇದನ್ನೂ ಓದಿ:

ಕರ್ನಾಟಕ ಬಂದ್ ಎಚ್ಚರಿಕೆ

“ಮುಖ್ಯಮಂತ್ರಿಗಳಿಗೆ ಈಗಾಗಲೇ ಸದಾಶಿವನಗರದಲ್ಲಿ ಸ್ವಂತ ಮನೆಯಿದೆ. ಹೀಗಿರುವಾಗ ಐತಿಹಾಸಿಕ ಗೆಸ್ಟ್ ಹೌಸ್ ಅನ್ನು ನವೀಕರಿಸಿ ಇಲ್ಲಿಗೆ ಬಂದಿರುವುದು ತಪ್ಪು ನಡೆ. ಕುಮಾರಕೃಪಾ ಗೆಸ್ಟ್ ಹೌಸ್ ಅಸ್ತಿತ್ವವನ್ನು ಉಳಿಸಿಕೊಳ್ಳಲು ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಮತ್ತು ಅಗತ್ಯಬಿದ್ದರೆ ಕರ್ನಾಟಕ ಬಂದ್‌ಗೂ ಕರೆ ನೀಡಲಾಗುವುದು,” ಎಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Must Read

Skip to toolbar