ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟರಿಗೆ ಬರುತ್ತಿರುವ ಜೀವ ಬೆದರಿಕೆಗಳ ಸಂದೇಶ ಮುಂದುವರಿದಿದ್ದು, ಇದೀಗ ಖ್ಯಾತ ನಟ ಸೈಫ್ ಅಲಿ ಖಾನ್ ಅವರಿಗೂ ಕೊಲೆ ಬೆದರಿಕೆ ಬಂದಿದೆ. ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ತಲೆಮರೆಸಿಕೊಂಡ ಆರೋಪಿ ಜೀಶನ್ ಅಖ್ತರ್ ಹೆಸರಿನಲ್ಲಿ ಈ ಬೆದರಿಕೆ ಸಂದೇಶ ಬಂದಿರುವುದಾಗಿ ಮೂಲಗಳು ತಿಳಿಸಿವೆ. ಸದ್ಯ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಅಸಲಿ ಆರೋಪಿಯೇ ಅಥವಾ AI ಕೈವಾಡವೇ?
ಈ ಹಿಂದೆ ಬಾಲಿವುಡ್ ನಟರಾದ ತುಷಾರ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ ಅವರಿಗೂ ಇದೇ ರೀತಿಯ ಬೆದರಿಕೆಗಳು ಬಂದಿದ್ದವು. ಆ ಪ್ರಕರಣದ ಬೆನ್ನುಹತ್ತಿದ್ದ ಪೊಲೀಸರು ಬೆಂಗಳೂರಿನ 30 ವರ್ಷದ ಐಟಿ ಪದವೀಧರ ವೈಭವ್ ಮಿಶ್ರಾ ಎಂಬಾತನನ್ನು ಬಂಧಿಸಿದ್ದರು. ಆತನಿಗೆ ಯಾವುದೇ ಭೂಗತ ಗ್ಯಾಂಗ್ ಜೊತೆ ನಂಟು ಇರಲಿಲ್ಲ. ಬದಲಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ನಟರಿಗೆ ಬೆದರಿಕೆ ಹಾಕುತ್ತಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿತ್ತು.
ಹೀಗಾಗಿ, ಸೈಫ್ ಅಲಿ ಖಾನ್ ಅವರಿಗೆ ನಿಜವಾಗಿಯೂ ಮೋಸ್ಟ್ ವಾಂಟೆಡ್ ಆರೋಪಿ ಜೀಶನ್ ಅಖ್ತರ್ ಬೆದರಿಕೆ ಹಾಕಿದ್ದಾನೆಯೇ ಅಥವಾ ಬೇರೆ ಯಾರಾದರೂ ನಕಲಿ ಗುರುತು ಬಳಸಿ ನಟರನ್ನು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಆಯಾಮದಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಲಿವುಡ್ ತಾರೆಯರನ್ನು ಬೆಂಬಿಡದೆ ಕಾಡುತ್ತಿರುವ ಆತಂಕ
ಕಳೆದ ಅಕ್ಟೋಬರ್‌ನಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮುಂಬೈ ಬಂಗಲೆಯನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದ ಶಾಲೆಯೊಂದಕ್ಕೆ ಈ ಇಮೇಲ್ ಕಳುಹಿಸಲಾಗಿತ್ತು. ಅದೇ ತಿಂಗಳು, ಅಂದರೆ ಅಕ್ಟೋಬರ್ 18ರಂದು ನಟ ಟೈಗರ್ ಶ್ರಾಫ್ ಜುಹುವಿನಲ್ಲಿ ಫುಟ್‌ಬಾಲ್ ಆಡಿ ಮರಳುತ್ತಿದ್ದಾಗ ದುಷ್ಕರ್ಮಿಗಳು ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ನಟ ಯಾವುದೇ ದೊಡ್ಡ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದರು. ತನಿಖೆ ನಡೆಸಿದ ಮುಂಬೈ ಪೊಲೀಸರು ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಿದ್ದು, ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ:
ಯಾರು ಈ ಜೀಶನ್ ಅಖ್ತರ್?
ಅಜಿತ್ ಪವಾರ್ ಬಣದ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಪ್ರಕರಣದಲ್ಲಿ ಜೀಶನ್ ಅಖ್ತರ್ ಪ್ರಮುಖ ಆರೋಪಿಯಾಗಿದ್ದಾನೆ. ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಆಪ್ತ ಸ್ನೇಹಿತರಾಗಿದ್ದ ಬಾಬಾ ಸಿದ್ದಿಕಿ ಅವರನ್ನು 2024ರ ಅಕ್ಟೋಬರ್ 12ರಂದು ಮುಂಬೈನ ಬಾಂದ್ರಾದ ನಿರ್ಮಲ್ ನಗರದಲ್ಲಿರುವ ಅವರ ಪುತ್ರ, ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಂದಿನಿಂದ ಆರೋಪಿ ಜೀಶನ್ ಅಖ್ತರ್ ತಲೆಮರೆಸಿಕೊಂಡಿದ್ದಾನೆ.



