November 22, 2026
Sunday, November 22, 2026
spot_img

ಹ್ಯಾಟ್ರಿಕ್ ಕನಸಿಗೆ ಆನೆಬಲ: ಐಪಿಎಲ್ 2027ರಲ್ಲಿ ಆರ್‌ಸಿಬಿ ಪರ ಆಡಲು ಜೋಶ್ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದು ಬೀಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂಬರುವ 2027ರ ಟೂರ್ನಿಗೂ ಮುನ್ನವೇ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಆಸ್ಟ್ರೇಲಿಯಾದ ಸ್ಟಾರ್ ವೇಗಿ ಜೋಶ್ ಹೇಝಲ್‌ವುಡ್ 20ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಲು ಸಂಪೂರ್ಣವಾಗಿ ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ. 2025 ಮತ್ತು 2026ರಲ್ಲಿ ಚಾಂಪಿಯನ್ ಆಗಿರುವ ಆರ್‌ಸಿಬಿ, ಈ ಬಾರಿ ಐತಿಹಾಸಿಕ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದು, ಹೇಝಲ್‌ವುಡ್ ನಿರ್ಧಾರ ತಂಡಕ್ಕೆ ಆನೆಬಲ ತಂದಿದೆ.

2027ನೇ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಅತ್ಯಂತ ಬಿಡುವಿಲ್ಲದ ವರ್ಷವಾಗಿದೆ. ಜನವರಿಯಿಂದ ಮಾರ್ಚ್‌ವರೆಗೆ ಭಾರತದ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, ಐಪಿಎಲ್ ಮುಗಿದ ತಕ್ಷಣ ಇಂಗ್ಲೆಂಡ್‌ನಲ್ಲಿ ಪ್ರತಿಷ್ಠಿತ ಆ್ಯಶಸ್ ಸರಣಿ ಹಾಗೂ ವರ್ಷಾಂತ್ಯದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈ ಒತ್ತಡದ ವೇಳಾಪಟ್ಟಿಯಿಂದಾಗಿ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಈಗಾಗಲೇ 2027ರ ಐಪಿಎಲ್‌ನಿಂದ ಹಿಂದೆ ಸರಿದಿದ್ದು, ಪ್ಯಾಟ್ ಕಮಿನ್ಸ್ ಕೂಡ ಅಲಭ್ಯರಾಗುವ ಸಾಧ್ಯತೆಯಿದೆ. ಆದರೆ, ಈ ಎಲ್ಲಾ ಸವಾಲುಗಳ ನಡುವೆಯೂ ಹೇಝಲ್‌ವುಡ್ ಮಾತ್ರ ಆರ್‌ಸಿಬಿ ಪರ ಕಣಕ್ಕಿಳಿಯಲು ಒಪ್ಪಿಗೆ ಸೂಚಿಸಿದ್ದಾರೆ.

ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸಿ ವಿಕೆಟ್ ಕಬಳಿಸುವ ಹೇಝಲ್‌ವುಡ್ ಅವರನ್ನು ಆರ್‌ಸಿಬಿ 12.50 ಕೋಟಿ ನೀಡಿ ಉಳಿಸಿಕೊಂಡಿತ್ತು. ಈಗಾಗಲೇ ತಂಡದಲ್ಲಿರುವ ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೇಕಬ್ ಡಫಿ, ನುವಾನ್ ತುಷಾರ ಮತ್ತು ರಾಸಿಖ್ ದಾರ್ ಅವರೊಂದಿಗೆ ಹೇಝಲ್‌ವುಡ್ ಸೇರಿಕೊಳ್ಳುವುದರಿಂದ ಬೆಂಗಳೂರಿನ ವೇಗದ ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠವಾಗಿದೆ.

20 ಆಟಗಾರರನ್ನು ಉಳಿಸಿಕೊಂಡಿರುವ ಆರ್‌ಸಿಬಿ ಬಳಿ ಮಿನಿ ಹರಾಜಿಗೆ 14.15 ಕೋಟಿ ಮೊತ್ತವಿದೆ. ತಂಡದಲ್ಲಿ ಇನ್ನೂ 5 ಸ್ಥಾನಗಳು ಖಾಲಿಯಿದ್ದು, ಕೇವಲ ಒಂದು ವಿದೇಶಿ ಆಟಗಾರನ ಸ್ಥಾನ ಮಾತ್ರ ಬಾಕಿಯಿದೆ. ಹೇಝಲ್‌ವುಡ್ ಲಭ್ಯತೆ ಖಚಿತವಾಗಿರುವುದರಿಂದ ಹರಾಜಿನಲ್ಲಿ ವಿದೇಶಿ ವೇಗಿಗಾಗಿ ಹುಡುಕಾಡುವ ತಲೆನೋವು ಆಡಳಿತ ಮಂಡಳಿಗೆ ತಪ್ಪಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಮತ್ತೆ ತಮ್ಮ ನೆಚ್ಚಿನ ವೇಗಿಯ ಮಾರಕ ಬೌಲಿಂಗ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Must Read