November 22, 2026
Sunday, November 22, 2026
spot_img

ಹುಲಿ-ಆನೆ ಮುಂದೆ ತಮಿಳುನಾಡು ಸಚಿವರ ರೀಲ್ಸ್ ಹುಚ್ಚಾಟ: ವಿವಾದಕ್ಕೆ ಬಂಡೀಪುರ ಡಿಸಿಎಫ್ ತೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಮಾಜಿಕ ಜಾಲತಾಣಗಳ ರೀಲ್ಸ್ ಮೋಹಕ್ಕಾಗಿ ವನ್ಯಜೀವಿಗಳ ನೆಮ್ಮದಿಗೆ ಭಂಗ ತಂದ ತಮಿಳುನಾಡು ಸಚಿವ ವಣ್ಣಿ ಅರಸು ಅವರ ವಿಡಿಯೋ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಫಾರಿ ವಾಹನದಿಂದ ಕೆಳಗಿಳಿದು ಹುಲಿ ಹಾಗೂ ಕಾಡಾನೆಯನ್ನು ಹಿಂಬಾಲಿಸಿರುವ ದೃಶ್ಯಗಳು ವೈರಲ್ ಆಗಿದ್ದು, ಈ ಬಗ್ಗೆ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ನಂದೀಶ್ ಅವರು ಸ್ಪಷ್ಟ ಚಿತ್ರಣ ನೀಡಿದ್ದಾರೆ.

ವಿವಾದಕ್ಕೆ ಕಾರಣವಾದ ವೈರಲ್ ದೃಶ್ಯ

ಕುಟುಂಬ ಸಮೇತ ಅರಣ್ಯ ವಿಹಾರಕ್ಕೆ ತೆರಳಿದ್ದ ಸಚಿವ ವಣ್ಣಿ ಅರಸು, ಸಫಾರಿ ನಿಯಮಗಳನ್ನು ಗಾಳಿಗೆ ತೂರಿ ವಾಹನದಿಂದ ಕೆಳಗಿಳಿದು ರಸ್ತೆಯಲ್ಲಿದ್ದ ಹುಲಿಯ ಹಿಂದೆ ಓಡಿರುವುದು ಹಾಗೂ ಆನೆಯ ಸನಿಹಕ್ಕೆ ತೆರಳಿ ವಿಡಿಯೋ ಚಿತ್ರೀಕರಿಸಿಕೊಂಡಿರುವುದು ಕಂಡುಬಂದಿದೆ. ವನ್ಯಜೀವಿಗಳಿಗೆ ಕಿರುಕುಳ ನೀಡಿದ ಈ ವರ್ತನೆಗೆ ವನ್ಯಜೀವಿ ಪ್ರೇಮಿಗಳು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ದೃಶ್ಯಗಳು ಕರ್ನಾಟಕದ ಬಂಡೀಪುರದಲ್ಲಿ ಸೆರೆಯಾಗಿವೆ ಎಂಬ ಆರೋಪ ಕೇಳಿಬಂದಿದ್ದರಿಂದ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು.

ಬಂಡೀಪುರ ಡಿಸಿಎಫ್ ನೀಡಿದ ಸ್ಪಷ್ಟನೆ ಏನು?

ಈ ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡಿರುವ ಬಂಡೀಪುರ ಡಿಸಿಎಫ್ ನಂದೀಶ್, “ಸಚಿವ ವಣ್ಣಿ ಅರಸು ಅವರು ಕಳೆದ ನವೆಂಬರ್ 10ರಂದು ಬಂಡೀಪುರದಲ್ಲಿ ಸಫಾರಿ ನಡೆಸಿದ್ದು ನಿಜ. ಆದರೆ, ವೈರಲ್ ವಿಡಿಯೋದಲ್ಲಿರುವಂತೆ ವಾಹನದಿಂದ ಕೆಳಗಿಳಿದು ಪ್ರಾಣಿಗಳನ್ನು ಹಿಂಬಾಲಿಸಿರುವ ಘಟನೆ ನಡೆದಿರುವುದು ನಮ್ಮ ವ್ಯಾಪ್ತಿಯಲ್ಲಲ್ಲ; ಬದಲಾಗಿ ಪಕ್ಕದ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲಿ” ಎಂದು ತಿಳಿಸಿದ್ದಾರೆ.

“ಬಂಡೀಪುರ ಸಫಾರಿಯ ವಾಹನದ ದೃಶ್ಯಗಳು ಹಾಗೂ ಮಧುಮಲೈ ಅರಣ್ಯದಲ್ಲಿ ವಾಹನದಿಂದ ಇಳಿದ ದೃಶ್ಯಗಳನ್ನು ಒಟ್ಟಿಗೆ ಸೇರಿಸಿ ರೀಲ್ಸ್ ಸಿದ್ಧಪಡಿಸಲಾಗಿದೆ. ಬಂಡೀಪುರದಲ್ಲಿ ಪ್ರವಾಸಿಗರು ವಾಹನದಿಂದ ಕೆಳಗಿಳಿಯಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಪ್ರಾಥಮಿಕ ತನಿಖೆಯಿಂದ ಇದು ನಮ್ಮಲ್ಲಿ ನಡೆದಿಲ್ಲ ಎಂಬುದು ಖಚಿತವಾಗಿದ್ದರೂ, ಹೆಚ್ಚಿನ ಖಚಿತತೆಗಾಗಿ ನಮ್ಮ ಸಫಾರಿ ವಾಹನದ ಡ್ಯಾಶ್ ಕ್ಯಾಮೆರಾ ದೃಶ್ಯಾವಳಿಗಳನ್ನು ಮರುಪರಿಶೀಲಿಸುತ್ತೇವೆ” ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನಿಯಮ ಉಲ್ಲಂಘಿಸಿಲ್ಲ ಎಂದ ಸಚಿವ

ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿರುವ ಸಚಿವ ವಣ್ಣಿ ಅರಸು, ತಾವು ಕಳೆದ 15 ವರ್ಷಗಳಿಂದ ಟ್ರೆಕ್ಕಿಂಗ್ ಮಾಡುತ್ತಿದ್ದು, ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆದೇ ಕಾಡಿನೊಳಗೆ ಪ್ರವೇಶಿಸಿದ್ದಾಗಿ ಹೇಳಿಕೊಂಡಿದ್ದಾರೆ. ಕೇವಲ ಕುತೂಹಲಕ್ಕಾಗಿ ಹುಲಿಯನ್ನು ಹಿಂಬಾಲಿಸಿದ್ದೇನೆಯೇ ಹೊರತು ಯಾವುದೇ ಅರಣ್ಯ ನಿಯಮಗಳನ್ನು ಮೀರಿಲ್ಲ ಎಂದು ಅವರು ಸಮರ್ಥನೆ ನೀಡಿದ್ದಾರೆ.

Must Read

Skip to toolbar