ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಜನಪ್ರಿಯ ನಟ ಕಾರ್ತಿಕ್ ಆರ್ಯನ್ ಇಂದು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ಅಭಿಮಾನಿಗಳಿಗೆ ಭರ್ಜರಿ ಹಾಗೂ ಅಷ್ಟೇ ರೋಮಾಂಚಕಾರಿ ಉಡುಗೊರೆಯೊಂದು ಸಿಕ್ಕಿದೆ. ಇದುವರೆಗೂ ಪ್ರೇಮಕಥೆ ಮತ್ತು ಹಾಸ್ಯ ಪಾತ್ರಗಳ ಮೂಲಕ ರಂಜಿಸುತ್ತಿದ್ದ ಕಾರ್ತಿಕ್, ಈಗ ಮೊದಲ ಬಾರಿಗೆ ದೈತ್ಯರ ಭಯಾನಕ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಚಿತ್ರಕ್ಕೆ ‘ಕಾಳಿಯ’ ಎಂದು ಹೆಸರಿಡಲಾಗಿದ್ದು, ಇಂದು ಇದರ ಅಧಿಕೃತ ಘೋಷಣೆಯಾಗಿದೆ.
ನಿಗೂಢ ವೀಡಿಯೊ ಮೂಲಕ ಕುತೂಹಲ ಹೆಚ್ಚಿಸಿದ ಕರಣ್ ಜೋಹರ್ ನಿರ್ಮಾಣ ಸಂಸ್ಥೆಗಳಾದ ಧರ್ಮ ಪ್ರೊಡಕ್ಷನ್ಸ್ ಮತ್ತು ಡೋಪಮೈನ್ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಚಿತ್ರದ ಭಯಾನಕ ಹಾಗೂ ಕುತೂಹಲಕಾರಿ ಘೋಷಣಾ ವೀಡಿಯೊವನ್ನು ಹಂಚಿಕೊಂಡಿರುವ ನಿರ್ಮಾಪಕ ಕರಣ್ ಜೋಹರ್, “ಶ್ರೀಕೃಷ್ಣ ಅದನ್ನು ದೂರ ಅಟ್ಟಿದ್ದ. ಆದರೆ ನಾವೇ ಮನುಷ್ಯರು ಅದನ್ನು ಮರಳಿ ಕರೆತಂದೆವು” ಎಂಬ ಮಾರ್ಮಿಕ ಸಾಲುಗಳನ್ನು ಬರೆದಿದ್ದಾರೆ. ಈ ಸಾಲುಗಳು ಚಿತ್ರದ ಕಥೆಯ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿವೆ.
‘ಕಾಳಿಯ’ ಕೇವಲ ಒಂದು ಸಾಮಾನ್ಯ ಥ್ರಿಲ್ಲರ್ ಸಿನಿಮಾವಲ್ಲ. ಬದಲಾಗಿ ಭಾರತೀಯ ಪುರಾಣಗಳು, ಜಾನಪದ ಕಥೆಗಳು ಹಾಗೂ ನಮ್ಮ ನೆಲದ ನಂಬಿಕೆಗಳನ್ನು ಆಧರಿಸಿ ಹೆಣೆಯಲಾದ ಒಂದು ಅದ್ಭುತ ಲೋಕವಾಗಿದೆ. ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಗೂ ಇದು ಹೊಸ ಪ್ರಯೋಗವಾಗಿದ್ದು, ಇದೇ ಮೊದಲ ಬಾರಿಗೆ ದೈತ್ಯರ ಕಥಾಹಂದರವುಳ್ಳ ಥ್ರಿಲ್ಲರ್ ಸಿನಿಮಾಗೆ ಕೈಹಾಕಿದೆ. ಕರಣ್ ಜೋಹರ್, ಅದಾರ್ ಪೂನಾವಾಲಾ, ಅಪೂರ್ವ ಮೆಹ್ತಾ, ಸೋಮೆನ್ ಮಿಶ್ರಾ, ಮರಿಜ್ಕೆ ಡಿಸೋಜಾ ಹಾಗೂ ಸ್ವತಃ ಕಾರ್ತಿಕ್ ಆರ್ಯನ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
‘ದಿ ನೈಟ್ ಮ್ಯಾನೇಜರ್’ ಮತ್ತು ‘ಆರ್ಯ’ ನಂತಹ ಸೂಪರ್ ಹಿಟ್ ವೆಬ್ ಸರಣಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಸಂದೀಪ್ ಮೋದಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಸಂದೀಪ್ ಮೋದಿ ಅವರ ಮೊದಲ ಹಿಂದಿ ಸಿನಿಮಾ ಇದಾಗಿದೆ. ಕಾರ್ತಿಕ್ ಆರ್ಯನ್ ಅವರನ್ನು ಹಿಂದೆಂದೂ ಕಾಣದ ವಿಭಿನ್ನ ಅವತಾರದಲ್ಲಿ ತೆರೆಯ ಮೇಲೆ ತರಲು ಅವರು ಸಜ್ಜಾಗಿದ್ದಾರೆ.
ಭಾರಿ ಬಜೆಟ್ ಮತ್ತು ಅದ್ಧೂರಿ ತಯಾರಿಯೊಂದಿಗೆ ಮೂಡಿಬರಲಿರುವ ‘ಕಾಳಿಯ’, 2028ರ ಮೇ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.



