ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 57ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಕನ್ನಡದ ‘ರೂಬಿ-ಕ್ಯೂಬ್’ ಚಿತ್ರತಂಡ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿತು. ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ ಮತ್ತು ಚಿತ್ರದ ಮುಖ್ಯ ನಟಿ ವೈನಿಧಿ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡರು.
ಕಥೆಗಳೇ ನನ್ನನ್ನು ಹುಡುಕಿಕೊಂಡು ಬರುತ್ತವೆ: ಪಿ. ಶೇಷಾದ್ರಿ
ತಮ್ಮ 13ನೇ ಚಿತ್ರ ‘ರೂಬಿ-ಕ್ಯೂಬ್’ ಕುರಿತು ಮಾತನಾಡಿದ ಪಿ. ಶೇಷಾದ್ರಿ, “ನಾನು ಕಥೆಗಳಿಗಾಗಿ ಹುಡುಕಾಡುವುದಿಲ್ಲ, ಬದಲಿಗೆ ಕಥೆಗಳೇ ನನ್ನ ಬಳಿಗೆ ಬರುವಂತೆ ಕಾಯುತ್ತೇನೆ. ನೈಜ ಜೀವನದ ಅನುಭವಗಳನ್ನು ಆಧರಿಸಿದ ಈ ಚಿತ್ರವು ಭಾರತೀಯ ಕುಟುಂಬ ವ್ಯವಸ್ಥೆಯ ಸಂಕೀರ್ಣತೆ ಹಾಗೂ ಕಾಲಕ್ರಮೇಣ ಬದಲಾಗುವ ಸಂಬಂಧಗಳನ್ನು ಕಟ್ಟಿಕೊಡುತ್ತದೆ” ಎಂದರು. ರೂಬಿಕ್ಸ್ ಕ್ಯೂಬ್‌ನಲ್ಲಿರುವಂತೆ ಮನುಷ್ಯನ ಬದುಕಿನಲ್ಲೂ ವಿಭಿನ್ನ ಬಣ್ಣ ಮತ್ತು ಆಯಾಮಗಳಿರುತ್ತವೆ. ಕೇವಲ ಸಂದೇಶ ನೀಡುವುದಕ್ಕಿಂತ ಪ್ರೇಕ್ಷಕರೊಂದಿಗೆ ಭಾವನಾತ್ಮಕ ಬೆಸುಗೆ ಸಾಧಿಸುವುದೇ ತಮ್ಮ ಚಿತ್ರಗಳ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ಮೂರು ತಲೆಮಾರುಗಳ ಕಥೆ
ನಟಿ ವೈನಿಧಿ ಜಗದೀಶ್ ಮಾತನಾಡಿ, “ನಾಟಕೀಯತೆಗಿಂತ ದೈನಂದಿನ ಬದುಕಿನ ಸಹಜ ಅನುಭವಗಳಿಗೆ ಇಲ್ಲಿ ಒತ್ತು ನೀಡಲಾಗಿದೆ. ಮಗಳು ತವರು ಮನೆಗೆ ಮರಳಿದಾಗ ತನ್ನ ಪೋಷಕರ ಸಂಬಂಧದ ವಿವಿಧ ಮಜಲುಗಳನ್ನು ಅರಿತುಕೊಳ್ಳುವ ಸನ್ನಿವೇಶಗಳ ಸುತ್ತ ಕಥೆ ಸಾಗುತ್ತದೆ” ಎಂದು ವಿವರಿಸಿದರು.
ಗಿರಿಧಾಮವೊಂದರ ಪ್ರವಾಸದ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರವು ಒಂದೇ ಸೂರಿನಡಿ ಮೂರು ತಲೆಮಾರುಗಳನ್ನು ಒಂದುಗೂಡಿಸುತ್ತದೆ. ಮನೋವಿಜ್ಞಾನಿ ರೋಹಿಣಿ ಮತ್ತು ಆಕೆಯ ಮಾಜಿ ಪತಿ ಮೂರ್ತಿ ಅವರ ಮಗಳು ಚಿತ್ರಾ, ತನ್ನ ವೈವಾಹಿಕ ಜೀವನದ ಸವಾಲುಗಳ ನಡುವೆ ಪೋಷಕರನ್ನು ಮತ್ತೆ ಒಟ್ಟುಗೂಡಿಸುವ ಕಥಾಹಂದರವನ್ನು ‘ರೂಬಿ-ಕ್ಯೂಬ್’ ಹೊಂದಿದೆ.
ಐಎಫ್‌ಎಫ್‌ಐ 2026ರಲ್ಲಿ ನಡೆದ ಈ ಸಂವಾದವು ‘ರೂಬಿ-ಕ್ಯೂಬ್’ ಚಿತ್ರದ ಹಿಂದಿನ ಸೃಜನಶೀಲ ದೃಷ್ಟಿಕೋನ ಹಾಗೂ ಸಮಕಾಲೀನ ಕುಟುಂಬ ಸಂಬಂಧಗಳ ಕುರಿತ ಅದರ ಅನ್ವೇಷಣೆಯ ಬಗ್ಗೆ ಪ್ರೇಕ್ಷಕರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಒಳನೋಟ ಒದಗಿಸಿತು. ಉತ್ಸವದಲ್ಲಿ ಈ ಚಿತ್ರದ ಪ್ರದರ್ಶನವು ವಿವಿಧ ದೇಶಗಳ ವೈವಿಧ್ಯಮಯ ಚಲನಚಿತ್ರ ಅಭಿವ್ಯಕ್ತಿಗಳು ಮತ್ತು ಕಥನ ಪರಂಪರೆಗಳನ್ನು ಸಂಭ್ರಮಿಸುವ ಐಎಫ್‌ಎಫ್‌ಐನ ಆಶಯಕ್ಕೆ ಮತ್ತಷ್ಟು ಮೆರುಗು ನೀಡಿದೆ.



