November 23, 2026
Monday, November 23, 2026
spot_img

ಉದ್ಯೋಗ ಸೃಷ್ಟಿಯಲ್ಲಿ ಕಂಪನಿಗಳ ವೈಫಲ್ಯ: ಪ್ರಧಾನಿ ಮೋದಿ ಅಭಿಪ್ರಾಯಕ್ಕೆ ಶಶಿ ತರೂರ್ ಸಹಮತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾರ್ಪೊರೇಟ್ ತೆರಿಗೆ ಕಡಿತದ ಲಾಭವನ್ನು ಉದ್ಯೋಗಿಗಳಿಗೆ ವರ್ಗಾಯಿಸುವಲ್ಲಿ ಹಾಗೂ ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಖಾಸಗಿ ಕಂಪನಿಗಳು ವಿಫಲವಾಗಿವೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಭಾನುವಾರ ಸಹಮತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ದೇಶದ ನಿರುದ್ಯೋಗ ಸಮಸ್ಯೆ, ನಿಯಮಾವಳಿಗಳ ತೊಡಕು ಹಾಗೂ ಭ್ರಷ್ಟಾಚಾರದ ಕುರಿತೂ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಶಿ ತರೂರ್, “ಪ್ರಧಾನಿಯವರು ಹೇಳಿರುವುದು ವಾಸ್ತವ ಸಂಗತಿ. ಕಂಪನಿಗಳು ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಿ, ಹೊಸ ಉದ್ಯೋಗಗಳನ್ನು ಸೃಷ್ಟಿಸಲಿ ಮತ್ತು ಉದ್ಯೋಗಿಗಳ ವೇತನ ಹೆಚ್ಚಿಸಲಿ ಎಂಬ ಉದ್ದೇಶದಿಂದ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಿತ್ತು. ಆದರೆ ಕಂಪನಿಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬ ಪ್ರಧಾನಿಯವರ ವಾದದಲ್ಲಿ ಅರ್ಥವಿದೆ,” ಎಂದು ತಿಳಿಸಿದರು.

ದೇಶದಲ್ಲಿ ಉದ್ಯೋಗಾವಕಾಶಗಳ ಕೊರತೆಯ ಬಗ್ಗೆ ಸಾರ್ವಜನಿಕರು ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ತರೂರ್ ಹೇಳಿದರು. ಪ್ರತಿಷ್ಠಿತ ಐಐಟಿ ಸಂಸ್ಥೆಯ ಪದವೀಧರರಿಗೂ ಉದ್ಯೋಗ ಸಿಗದಿರುವ ವರದಿಗಳನ್ನು ಉಲ್ಲೇಖಿಸಿದ ಅವರು, ಹಿಂದೆಂದೂ ಕೇಳಿರದ ಇಂತಹ ಘಟನೆಗಳು ಕಾಲೇಜು ಪದವೀಧರರ ಉದ್ಯೋಗದ ಭವಿಷ್ಯವು ಕಠಿಣವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದರು.

ಆರ್ಥಿಕತೆಯತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದ ತರೂರ್, ವ್ಯಾಪಾರ-ವಹಿವಾಟು ನಡೆಸಲು ಇರುವ ನಿಯಮಗಳನ್ನು ಸರಳಗೊಳಿಸಬೇಕು ಎಂದರು. “ಸುಲಭ ವ್ಯಾಪಾರ ಇನ್ನೂ ವಾಸ್ತವವಾಗಿ ಜಾರಿಯಾಗಿಲ್ಲ. ನಾನು ಮಾತನಾಡಿಸಿದ ಪ್ರತಿಯೊಬ್ಬ ಉದ್ಯಮಿಯ ಪ್ರಕಾರವೂ ಭ್ರಷ್ಟಾಚಾರ ಹಿಂದೆಂದಿಗಿಂತಲೂ ಹೆಚ್ಚಾಗಿದೆ,” ಎಂದು ಅವರು ಆರೋಪಿಸಿದರು. ಪ್ರಧಾನಿಯವರ ‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಎಂಬ ಘೋಷಣೆಯನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ ತರೂರ್, ಅದು ಕೇವಲ ಗೋಮಾಂಸಕ್ಕೆ ಮಾತ್ರ ಸೀಮಿತವಾಗಿತ್ತು ಎಂಬುದು ಈಗ ತಿಳಿಯುತ್ತಿದೆ ಎಂದು ಟೀಕಿಸಿದರು.

Must Read

Skip to toolbar