November 23, 2026
Monday, November 23, 2026
spot_img

‘ರಾಮಾಯಣ’ಕ್ಕಾಗಿ ಹತ್ತಾರು ಬಿಗ್ ಬಜೆಟ್ ಸಿನಿಮಾ ಕೈಬಿಟ್ಟ ರೆಹಮಾನ್: ಹಾಡುಗಳ ಶೈಲಿಗೆ ನೆಟ್ಟಿಗರ ಆಕ್ಷೇಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮಿತ್ ಮಲ್ಹೋತ್ರಾ ನಿರ್ಮಾಣ ಮತ್ತು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಕಲಾವಿದರ ಅದ್ಭುತ ಅಭಿನಯದ ಜೊತೆಗೆ ಚಿತ್ರದ ಸಂಗೀತವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಅವರ ಜೋಡಿ ಈ ಚಿತ್ರಕ್ಕೆ ಸಂಗೀತ ನೀಡಿದೆ.

ಭಾನುವಾರ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಎ.ಆರ್. ರೆಹಮಾನ್, ‘ರಾಮಾಯಣ’ ಸಂಗೀತ ಪಯಣದ ಕುರಿತು ಮನಬಿಚ್ಚಿ ಮಾತನಾಡಿದರು. “ನಾವು ಕಳೆದ ಮೂರು ವರ್ಷಗಳಿಂದ ರಾಮಾಯಣದ ಥೀಮ್ ಮತ್ತು ಹಾಡುಗಳಿಗಾಗಿ ಕೆಲಸ ಮಾಡುತ್ತಿದ್ದೇವೆ. ಕೆಲವೊಂದು ಟ್ಯೂನ್‌ಗಳನ್ನು 12 ರಿಂದ 13 ಬಾರಿ ಬದಲಾಯಿಸಿ, ಅಂತಿಮವಾಗಿ ಎಲ್ಲರಿಗೂ ಇಷ್ಟವಾಗುವಂತಹ ಸಂಗೀತವನ್ನು ಸಿದ್ಧಪಡಿಸಿದ್ದೇವೆ. ವಿಶೇಷವಾಗಿ ‘ರಾವಣ ತಾಂಡವ’ ಹಾಡಿಗೆ 13 ವಿಭಿನ್ನ ರೂಪಗಳನ್ನು ನೀಡಲಾಗಿತ್ತು” ಎಂದು ರೆಹಮಾನ್ ವಿವರಿಸಿದ್ದಾರೆ.

ಈ ಮಹಾಕಾವ್ಯದ ಸಂಗೀತಕ್ಕಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ರೆಹಮಾನ್ ದೊಡ್ಡ ತ್ಯಾಗವನ್ನೇ ಮಾಡಿದ್ದಾರೆ. “ರಾಮಾಯಣದ ಗುಂಗಿನಲ್ಲಿರಲು ನಾನು ಬರೋಬ್ಬರಿ 10 ರಿಂದ 12 ಸಿನಿಮಾಗಳನ್ನು ಕೈಬಿಟ್ಟೆ. ಅದರಲ್ಲಿ ಹಲವು ದೊಡ್ಡ ನಿರ್ದೇಶಕರ ಚಿತ್ರಗಳೂ ಇದ್ದವು. ಆದರೆ ನನಗೆ ಈ ಬಗ್ಗೆ ಹೆಮ್ಮೆಯಿದೆ. ನನ್ನ ಕಲಾತ್ಮಕ ತುಡಿತಕ್ಕೆ ತೃಪ್ತಿ ನೀಡುವ ಕೆಲಸವನ್ನಷ್ಟೇ ನಾನು ಒಪ್ಪಿಕೊಳ್ಳುತ್ತೇನೆ” ಎಂದಿದ್ದಾರೆ.

ಕವಿ ಕುಮಾರ್ ವಿಶ್ವಾಸ್ ಸಾಹಿತ್ಯವಿರುವ ಈ ಆಲ್ಬಮ್‌ನಲ್ಲಿ ಅರಿಜಿತ್ ಸಿಂಗ್, ಶ್ರೇಯಾ ಘೋಷಾಲ್ ಹಾಡಿರುವ ‘ಜೈ ಜೈ ರಾಮ್’, ವಿಶಾಲ್ ದದ್ಲಾನಿ ಧ್ವನಿಯ ‘ರಾವಣ ತಾಂಡವ’ ಹಾಗೂ ಎ.ಆರ್. ಅಮೀನ್, ವೈಶಾಲಿ ಸಾಮಂತ್ ಹಾಡಿರುವ ‘ಸೀತಾಸ್ ಆಸ್ಪಿರೇಷನ್’ ಗಮನ ಸೆಳೆದಿವೆ. ಆದರೆ, ಸಂಗೀತ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳೂ ವ್ಯಕ್ತವಾಗಿವೆ. ರಾವಣನ ಪಾತ್ರಕ್ಕೆ ತಕ್ಕಂತೆ ‘ರಾವಣ ತಾಂಡವ’ ಹಾಡಿನಲ್ಲಿ ಸಾಂಪ್ರದಾಯಿಕ ಅಬ್ಬರ ಮತ್ತು ತೀವ್ರತೆ ಕಡಿಮೆಯಾಗಿದೆ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ, ‘ಮಂಗಲ್ ರಂಗ್’ ಹಾಡಿನಲ್ಲಿ ಕವ್ವಾಲಿ ಶೈಲಿಯ ಪ್ರಭಾವವಿದೆ ಎಂಬ ವಿವಾದವೂ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ರಾಮಾಯಣದ ಸಂಗೀತ ಮೆಚ್ಚುಗೆಯ ಜೊತೆಗೆ ಬಿಸಿಬಿಸಿ ಚರ್ಚೆಗೂ ಕಾರಣವಾಗಿದೆ.

Must Read

Skip to toolbar