November 23, 2026
Monday, November 23, 2026
spot_img

ವಸತಿ ಶಾಲೆಗಳಲ್ಲಿ ನೀರಿನ ಕೊರತೆ, ಆಸ್ಪತ್ರೆಗಳಲ್ಲಿ ಔಷಧ ತತ್ವಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್‌.ಅಶೋಕ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ‘ಗಂಗಾ’ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ, ವಸತಿ ಶಾಲೆಯ ಬಡ ಮಕ್ಕಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಸಲು ಹಣವಿಲ್ಲವೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಕಿಡಿಕಾರಿದ್ದಾರೆ.

ಮಕ್ಕಳಿಗೆ ಮೂಲಭೂತ ಸೌಕರ್ಯವಿಲ್ಲ ಎಂದು ಆಕ್ರೋಶ

“ಒಂದೆಡೆ ಮುಖ್ಯಮಂತ್ರಿಗಳ ಐಷಾರಾಮಿ ‘ಗಂಗಾ’ ನಿವಾಸದ ವೈಭವೀಕರಣಕ್ಕೆ ಸರ್ಕಾರದ ಸಂಪನ್ಮೂಲಗಳು ಧಾರಾಳವಾಗಿ ಹರಿಯುತ್ತಿವೆ. ಮತ್ತೊಂದೆಡೆ, ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ನೂರಾರು ಬಡ ಮಕ್ಕಳಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ” ಎಂದು ಅಶೋಕ್ ಆರೋಪಿಸಿದ್ದಾರೆ. ಮಕ್ಕಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸಲಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ ಅಥವಾ ಬಡ ಮಕ್ಕಳ ಸಂಕಷ್ಟ ಸರ್ಕಾರದ ಆದ್ಯತೆಯ ಪಟ್ಟಿಯಲ್ಲೇ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ನಿವಾಸದ ವೈಭವಕ್ಕಿಂತ ಮಕ್ಕಳಿಗೆ ಒಂದು ಲೋಟ ಶುದ್ಧ ನೀರು ಮುಖ್ಯ ಎಂಬ ಕನಿಷ್ಠ ವಿವೇಕವಾದರೂ ಸರ್ಕಾರಕ್ಕೆ ಇರಲಿ ಎಂದು ಅವರು ಗುಡುಗಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಆರೋಪ

ಇದೇ ವೇಳೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಯ ಬಗ್ಗೆಯೂ ಗಮನ ಸೆಳೆದಿರುವ ಅಶೋಕ್, “ಸರ್ಕಾರದ ಬಾಕಿ ಹಣಕ್ಕೆ ಹೆದರಿ ಔಷಧ ಕಂಪನಿಗಳು ಸರಬರಾಜು ಮಾಡಲು ಮುಂದೆ ಬರುತ್ತಿಲ್ಲ. ಸಕಾಲದಲ್ಲಿ ಬಿಲ್ ಪಾವತಿಸದ ಕಾರಣ ಸಮರ್ಥ ಕಂಪನಿಗಳು ಟೆಂಡರ್‌ಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿವೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಜೀವರಕ್ಷಕ ಔಷಧಗಳು ಮತ್ತು ಉಪಕರಣಗಳು ಸಿಗದಂತಾಗಿದೆ” ಎಂದು ದೂರಿದ್ದಾರೆ.

ಇದನ್ನೂ ಓದಿ:

ಆರೋಗ್ಯ ಇಲಾಖೆಯ ಅವ್ಯವಸ್ಥೆ ಬಯಲು

“ಕಮಿಷನ್ ದಂಧೆ, ಟೆಂಡರ್ ವಿಳಂಬ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ವೈದ್ಯಕೀಯ ಸರಬರಾಜು ನಿಗಮ ಸಂಪೂರ್ಣ ಹಳ್ಳ ಹಿಡಿದಿದೆ. ಸ್ವತಃ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೇ ನಿಗಮದ ಲೋಪದೋಷಗಳನ್ನು ಪಟ್ಟಿ ಮಾಡಿ ಆಯುಕ್ತರಿಗೆ ಪತ್ರ ಬರೆದಿರುವುದು ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ” ಎಂದು ಅಶೋಕ್ ಟೀಕಿಸಿದ್ದಾರೆ. ಕೇವಲ ಪತ್ರ ಬರೆದು ವರದಿ ಕೇಳುವ ನಾಟಕ ಬಿಟ್ಟು, ಬಾಕಿ ಬಿಲ್‌ಗಳನ್ನು ತಕ್ಷಣ ಪಾವತಿಸಿ ಆಸ್ಪತ್ರೆಗಳಿಗೆ ಅಗತ್ಯ ಔಷಧ ಪೂರೈಸಲು ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

Must Read

Skip to toolbar