ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೌರವಧನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ನವೆಂಬರ್ 17ರಿಂದ ಆರಂಭವಾಗಿರುವ ಈ ಹೋರಾಟವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕೊರೆಯುವ ಚಳಿ ಮತ್ತು ಮೂಲಸೌಕರ್ಯಗಳ ಕೊರತೆಯ ನಡುವೆ ಧರಣಿ ನಿರತರಾಗಿರುವ ಕಾರ್ಯಕರ್ತೆಯರ ಪೈಕಿ ಈವರೆಗೆ 17 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
17 ಕಾರ್ಯಕರ್ತೆಯರ ಅಸ್ವಸ್ಥತೆ
ಫ್ರೀಡಂ ಪಾರ್ಕ್‌ನಲ್ಲಿ ರಾತ್ರಿ ಹಗಲು ಧರಣಿ ನಡೆಸುತ್ತಿರುವ 17 ಆಶಾ ಕಾರ್ಯಕರ್ತೆಯರು ಜ್ವರ, ಅಸ್ತಮಾ ಮತ್ತು ವಾಕರಿಕೆಯಿಂದ ಅಸ್ವಸ್ಥಗೊಂಡು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ಕೊರತೆ ಅವರ ಸಂಕಷ್ಟವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.
ಸರ್ಕಾರದ ಭರವಸೆಗೂ ಜಗ್ಗದ ಪಟ್ಟು
ಪ್ರತಿಭಟನೆ ಹಿಂಪಡೆಯುವಂತೆ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಯು.ಟಿ. ಖಾದರ್ ಅವರು ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದರೂ. ಕಾರ್ಯಕರ್ತೆಯರು ಮೌಖಿಕ ಮಾತುಗಳನ್ನು ನಂಬದೆ ಲಿಖಿತ ಆದೇಶಕ್ಕಾಗಿ ಪಟ್ಟು ಹಿಡಿದಿದ್ದಾರೆ. ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಆರ್. ಅಶೋಕ್ ವಾಗ್ದಾಳಿ
ಮತ್ತೊಂದೆಡೆ, ಫ್ರೀಡಂ ಪಾರ್ಕ್‌ನಲ್ಲಿ ಹಗಲು-ರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬೆಂಬಲ ಸೂಚಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೂರೂವರೆ ವರ್ಷಗಳಾದರೂ ಹಿಂದಿನ ಭರವಸೆಗಳನ್ನೇ ಈಡೇರಿಸದ ಕಾಂಗ್ರೆಸ್ ಸರ್ಕಾರದ ಮೌಖಿಕ ಮಾತುಗಳನ್ನು ಕಾರ್ಯಕರ್ತೆಯರು ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿರುವ ಅವರು, ಮಹಿಳೆಯರಿಗೆ ಗ್ಯಾರಂಟಿ ನೀಡಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರನ್ನು ಬೀದಿಗೆ ತಳ್ಳಿರುವುದು ಅಮಾನವೀಯ ಎಂದು ಟೀಕಿಸಿದ್ದಾರೆ. ಮಾಸಿಕ 15,000 ಗೌರವಧನ, ನಿವೃತ್ತಿ ಇಡಿಗಂಟು ಹಾಗೂ ಸಮೀಕ್ಷಾ ಆ್ಯಪ್ ರದ್ದು ಸೇರಿದಂತೆ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮೌಖಿಕ ಮಾತಿನ ನಾಟಕ ಬಿಟ್ಟು ತಕ್ಷಣವೇ ಅಧಿಕೃತ ಲಿಖಿತ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಗ್ರಹಿಸಿದ್ದಾರೆ.



