November 23, 2026
Monday, November 23, 2026
spot_img

ಜಪಾನ್ ಬುಲೆಟ್ ರೈಲಿನಲ್ಲಿ ಸಿಎಂ ಡಿಕೆಶಿ, ಎಂ.ಬಿ. ಪಾಟೀಲ್ ಪ್ರಯಾಣ: ಟೊಯೊಟಾ ಕಂಪನಿ ಜೊತೆ ಬಂಡವಾಳ ಹೂಡಿಕೆ ಚರ್ಚೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್;‌

ರಾಜ್ಯಕ್ಕೆ ವಿದೇಶಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದ ನಿಯೋಗವು ಸೋಮವಾರ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿತು.

ಶಿಂಕಾನ್‌ಸೆನ್ ಬುಲೆಟ್ ರೈಲಿನಲ್ಲಿ ಪ್ರಯಾಣ

ಟೊಯೊಟಾ ಕಂಪನಿಯೊಂದಿಗಿನ ಮಹತ್ವದ ಸಭೆಗೆ ತೆರಳುವ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರು ಟೋಕಿಯೋದಿಂದ ನಗೋಯಾಗೆ ಜಪಾನ್‌ನ ವಿಶ್ವಪ್ರಸಿದ್ಧ ‘ಶಿಂಕಾನ್‌ಸೆನ್’ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರು. ಜಪಾನ್‌ನ ವಿಶ್ವದರ್ಜೆಯ ಮೂಲಸೌಕರ್ಯ, ತಂತ್ರಜ್ಞಾನ ಹಾಗೂ ನಗರಾಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡಿ ರಾಜ್ಯದ ಅಭಿವೃದ್ಧಿಗೆ ಅಳವಡಿಸಿಕೊಳ್ಳುವುದು ಈ ಪ್ರವಾಸದ ಪ್ರಮುಖ ಭಾಗವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಟೊಯೊಟಾ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಚರ್ಚೆ

ಬಳಿಕ ನಿಯೋಗವು ಜಪಾನ್‌ನ ಮೊಟೊಮಾಚಿ ಘಟಕದಲ್ಲಿ ಟೊಯೊಟಾ ಮೋಟಾರ್ ಕಾರ್ಪೊರೇಷನ್‌ನ ಉನ್ನತ ನಾಯಕರೊಂದಿಗೆ ಸಭೆ ನಡೆಸಿತು. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿಸುವುದು, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವುದು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ಈ ಮಾತುಕತೆ ನಡೆಯಿತು. ವಿಶೇಷವಾಗಿ ಬೆಂಗಳೂರಿನ ಆಚೆಗೂ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸಿ, ರಾಜ್ಯದ ಇತರ ಭಾಗಗಳಲ್ಲೂ ಹೂಡಿಕೆಗೆ ಅವಕಾಶ ಕಲ್ಪಿಸುವ ಬಗ್ಗೆ ಒತ್ತು ನೀಡಲಾಯಿತು.

ಬಿಡದಿ ಘಟಕದ ಐಟಿಐ ತರಬೇತುದಾರರೊಂದಿಗೆ ಸಂವಾದ

ಇದೇ ವೇಳೆ, ಟೊಯೊಟಾ ಕಂಪನಿಯ ‘ಗ್ಲೋಬಲ್ ಸ್ಕಿಲ್-ಅಪ್’ ಕಾರ್ಯಕ್ರಮದಡಿ ವಿಶೇಷ ತರಬೇತಿ ಮತ್ತು ಇಂಟರ್ನ್‌ಶಿಪ್‌ಗಾಗಿ ಜಪಾನ್‌ಗೆ ತೆರಳಿರುವ ಬಿಡದಿ ಘಟಕದ 20ಕ್ಕೂ ಹೆಚ್ಚು ಐಟಿಐ ತರಬೇತುದಾರರೊಂದಿಗೆ ಸಿಎಂ ಮತ್ತು ಸಚಿವರು ಸಂವಾದ ನಡೆಸಿದರು. ವಿದ್ಯಾರ್ಥಿಗಳ ಕಲಿಕಾ ಅನುಭವಗಳನ್ನು ವಿಚಾರಿಸಿದ ಮುಖ್ಯಮಂತ್ರಿಗಳು, ಈ ಅಂತಾರಾಷ್ಟ್ರೀಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ರಾಜ್ಯದ ಉತ್ಪಾದನಾ ವಲಯದ ಬೆಳವಣಿಗೆಗೆ ಕೊಡುಗೆ ನೀಡುವಂತೆ ಹುರಿದುಂಬಿಸಿದರು.

Must Read

Skip to toolbar