November 23, 2026
Monday, November 23, 2026
spot_img

ವಿದ್ಯುತ್ ಶಾಕ್ ನೀಡಿ ಕಾಡಾನೆ ಹ*ತ್ಯೆ ಪ್ರಕರಣ; ಇಬ್ಬರು ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆ

ಹೊಸದಿಗಂತ ವರದಿ ಕಾರವಾರ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಗಾವ್ ಬಳಿ ಗಂಡು ಕಾಡಾನೆಯೊಂದರ ಕಳೆಬರ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಮಹತ್ವ ಮಾಹಿತಿ ಲಭ್ಯವಾಗಿದ್ದು, ವಿದ್ಯುತ್ ಶಾಕ್ ನೀಡಿ ಆನೆಯ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಸ್ಥಳೀಯ ಇಬ್ಬರನ್ನು ಅರಣ್ಯ ಇಲಾಖೆಯವರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಶಿರಸಿ ತಾಲೂಕಿನ ಮಳಲಗಾವ್ ನಿವಾಸಿ ಕೃಷಿಕ ಶಿವಪ್ಪ ನಾಯ್ಕ(76)ಮತ್ತು ಅವರ ಮಗ ನಾಗರಾಜ ನಾಯ್ಕ(40)ಬಂಧಿತ ಆರೋಪಿಗಳಾಗಿದ್ದಾರೆ. ಆನೆಗಳಿಂದ ಭತ್ತದ ಬೆಳೆಯ ರಕ್ಷಣೆಗೆ ಆರೋಪಿತರು ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

ಶಿರಸಿ ತಾಲೂಕಿನ ಬಿಸ್ಲಕೊಪ್ಪ, ಮಳಲಗಾವ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಳೆದ ಒಂದು ವಾರದ ಹಿಂದೆ ಆನೆಗಳ ಹಿಂಡು ಕಾಣಿಸಿಕೊಂಡ ಕುರಿತಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ಭಾನುವಾರ ಸಂಜೆ ಮಳಲಗಾವ್ ನ ಹಳ್ಳವೊಂದರಲ್ಲಿ ಒಂಟಿ ಸಲಗವೊಂದು ಮೃತ ಸ್ಥಿತಿಯಲ್ಲಿ ಕಂಡು ಬಂದಿತ್ತು.

ಆನೆಯ ಕಳೆಬರ ಕಂಡುಬಂದ ಹಳ್ಳದ ಸಮೀಪ ಭತ್ತ ಮತ್ತು ಕಬ್ಬಿನ ಗದ್ದೆಗಳಿದ್ದು ಬೇಲಿಗೆ ವಿದ್ಯುತ್ ಕಂಬದಿಂದ ನೇರ ವಿದ್ಯುತ್ ಸಂಪರ್ಕ ಹರಿಸಿರುವುದು ಕಂಡು ಬಂದಿದೆ. ವಿದ್ಯುತ್ ಹರಿದು ಗದ್ದೆಯ ಒಂದು ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದ್ದು, ಬನವಾಸಿ ವಲಯ ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆಯ ಕುರಿತಂತೆ ತನಿಖೆ ಮುಂದುವರಿದಿದೆ.

Must Read

Skip to toolbar