November 23, 2026
Monday, November 23, 2026
spot_img

ಕಷ್ಟಕ್ಕೆ ಕರಿಬೇಡಿ, ಮೋಜು ಮಸ್ತಿಗೆ ಮರೀಬೇಡಿ: ಸರ್ಕಾರದ ವಿರುದ್ದ ವಿಜಯೇಂದ್ರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಖ್ಯಮಂತ್ರಿಗಳು ಜಪಾನ್ ಪ್ರವಾಸದಲ್ಲಿದ್ದರೆ, ಅಧಿಕಾರಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ; ಇತ್ತ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, “ಕಷ್ಟಕ್ಕೆ ಕರಿಬೇಡಿ, ಮೋಜು ಮಸ್ತಿಗೆ ಮರೀಬೇಡಿ ಎಂಬುದೇ ಈ ಸರ್ಕಾರದ ಸಾಧನೆಯ ಸರಮಾಲೆಯಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಸಿಎಂ ವಿದೇಶಿ ಪ್ರವಾಸಕ್ಕೆ ಟೀಕೆ

“ರಿಯಲ್ ಎಸ್ಟೇಟ್ ಮುಖ್ಯಮಂತ್ರಿಗಳು ತಮ್ಮ ದಂಡಿನೊಂದಿಗೆ ಜಪಾನ್ ಪ್ರವಾಸದಲ್ಲಿದ್ದು, ರಾಜ್ಯಕ್ಕೆ ಬಂಡವಾಳ ಹೂಡಿಕೆಯ ಹೊಳೆಯನ್ನೇ ಹರಿಸಲಿದ್ದಾರಂತೆ. ಅದೆಷ್ಟು ಬಂಡವಾಳ ತರುತ್ತಾರೋ ಆ ಶಿವನೇ ಬಲ್ಲ” ಎಂದು ವಿಜಯೇಂದ್ರ ಕುಟುಕಿದ್ದಾರೆ. ಇನ್ನು, ರಾಜ್ಯದಲ್ಲಿ ಅಧಿಕಾರಿಗಳಿಗೆ ಕೇಳುವವರೇ ಇಲ್ಲದಂತಾಗಿದ್ದು, ಜನಸಾಮಾನ್ಯರ ಸಂಕಷ್ಟ ಅವರಿಗೆ ಕಾಣುತ್ತಿಲ್ಲ. ರೈತರು ಬೆಳೆದ ಬೆಳೆಗೆ ನೀರಿಲ್ಲದೆ ಕಂಗಾಲಾಗಿದ್ದರೆ, ಗದಗ ಜಿಲ್ಲಾಧಿಕಾರಿ ಮಾತ್ರ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಆಶಾ ಕಾರ್ಯಕರ್ತೆಯರು ಮನೆ-ಕುಟುಂಬ ಬಿಟ್ಟು ಕೊರೆಯುವ ಚಳಿಯಲ್ಲಿ ಹಸುಗೂಸುಗಳೊಂದಿಗೆ ನ್ಯಾಯಯುತ ವೇತನಕ್ಕಾಗಿ ರಸ್ತೆಯಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರಿಗೆ ಬಿಡಿಗಾಸಿನ ಬರಪರಿಹಾರವನ್ನೂ ನೀಡಿಲ್ಲ, ಆದರೂ ಸರ್ಕಾರಕ್ಕೆ ಇವರ ಕೂಗು ಕೇಳಿಸುತ್ತಿಲ್ಲ ಎಂದು ದೂರಿದ್ದಾರೆ.

ನೊಂದ ಹೆಣ್ಣುಮಕ್ಕಳು, ರೈತರು ಮತ್ತು ಬಡವರ ಹಿಡಿಶಾಪ ಸರ್ಕಾರಕ್ಕೆ ತಟ್ಟದೇ ಬಿಡದು. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

Must Read