ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿ ದಳ (ಎಸ್ಎಡಿ) ಮತ್ತೆ ಒಂದಾಗಿವೆ. ಹಲವು ವರ್ಷಗಳ ಬಳಿಕ ಹಳೆಯ ಮಿತ್ರಪಕ್ಷಗಳು ಮತ್ತೆ ಕೈಜೋಡಿಸಿದ್ದು, ಚುನಾವಣೆಯಲ್ಲಿ ಮೈತ್ರಿಯಾಗಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿವೆ.
ಗುರುನಾನಕ್ ಜಯಂತಿ (ಗುರುಪುರಬ್) ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಮೈತ್ರಿಯನ್ನು ಘೋಷಿಸಿದರು. ಈ ಮೂಲಕ ಕಳೆದ ಕೆಲವು ವಾರಗಳಿಂದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದ ಮೈತ್ರಿ ಕುರಿತ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಎನ್ಡಿಎ ಮೈತ್ರಿಕೂಟದ ಅತ್ಯಂತ ಹಳೆಯ ಮಿತ್ರಪಕ್ಷವಾದ ಅಕಾಲಿ ದಳ ಮತ್ತೆ ಮೈತ್ರಿಕೂಟಕ್ಕೆ ಮರಳಿರುವುದು ಸಂತೋಷದ ಸಂಗತಿ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಬೆಳವಣಿಗೆಗೆ ಸಂತಸ ವ್ಯಕ್ತಪಡಿಸಿದ್ದು, ಬಿಜೆಪಿ-ಅಕಾಲಿ ದಳದ ಮೈತ್ರಿಯನ್ನು ‘ಹಿಂದೂ-ಸಿಖ್ ಸಹೋದರತ್ವದ ಸಂಕೇತ’ ಎಂದು ಬಣ್ಣಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮತ್ತು ಅಕಾಲಿ ದಳದ ನಡುವಿನ ಸುಮಾರು 24 ವರ್ಷಗಳ ಮೈತ್ರಿ 2020ರ ಸೆಪ್ಟೆಂಬರ್ನಲ್ಲಿ ಮುರಿದುಬಿದ್ದಿತ್ತು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಅಕಾಲಿ ದಳ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಈ ಸಂದರ್ಭದಲ್ಲಿ ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಕೇಂದ್ರ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಇದೀಗ ಸುಮಾರು ಆರು ವರ್ಷಗಳ ಬಳಿಕ ಎರಡೂ ಪಕ್ಷಗಳು ಮತ್ತೆ ಒಂದಾಗಿದ್ದು, 2027ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. 117 ವಿಧಾನಸಭಾ ಕ್ಷೇತ್ರಗಳಲ್ಲಿನ ಸೀಟು ಹಂಚಿಕೆ ಕುರಿತು ಎರಡೂ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ. ಸೀಟು ಹಂಚಿಕೆಯ ಅಂತಿಮ ಸೂತ್ರ ಇನ್ನಷ್ಟೇ ಪ್ರಕಟವಾಗಬೇಕಿದೆ.



