November 24, 2026
Tuesday, November 24, 2026
spot_img

ಆ್ಯಮಿ ಅಂಗಳದಲ್ಲಿ ಭಾರತಕ್ಕೆ ನಿರಾಸೆ: ವೀರ್ ದಾಸ್, ರಿಯಲ್ ಕಾಶ್ಮೀರ್ ಸರಣಿಗೆ ಕೈತಪ್ಪಿದ ಪ್ರಶಸ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಯಾರ್ಕ್‌ನ ಹಿಲ್ಟನ್ ಮಿಡ್‌ಟೌನ್‌ನಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದೆ. ವಿಶ್ವ ಟೆಲಿವಿಷನ್ ಕ್ಷೇತ್ರದ ಈ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತದಿಂದ ಎರಡು ಪ್ರಮುಖ ಕೃತಿಗಳು ನಾಮನಿರ್ದೇಶನಗೊಂಡಿದ್ದರೂ, ಯಾವುದಕ್ಕೂ ಪ್ರಶಸ್ತಿ ಒಲಿಯಲಿಲ್ಲ. ನಟ ಮೈಕೆಲ್ ಯೂರಿ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಭಾರತೀಯ ಸಿನಿಪ್ರಿಯರ ಚಿತ್ತ ನಾಮನಿರ್ದೇಶಿತ ಕೃತಿಗಳ ಮೇಲಿತ್ತು. ಆದರೆ ಅಂತಿಮ ಫಲಿತಾಂಶ ದೇಶದ ಸಿನಿಪ್ರಿಯರಲ್ಲಿ ಬೇಸರ ಮೂಡಿಸಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ‘ವೀರ್ ದಾಸ್: ಫೂಲ್ ವಾಲ್ಯೂಮ್’ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ಈ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. 2023ರಲ್ಲಿ ತಮ್ಮ ‘ಲ್ಯಾಂಡಿಂಗ್’ ಕಾರ್ಯಕ್ರಮಕ್ಕಾಗಿ ಆ್ಯಮಿ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ್ದ ವೀರ್ ದಾಸ್, ಈ ಬಾರಿ ಮತ್ತೊಮ್ಮೆ ಮೋಡಿ ಮಾಡುವ ವಿಶ್ವಾಸದಲ್ಲಿದ್ದರು. ಆದರೆ ಕಾಮಿಡಿ ವಿಭಾಗದಲ್ಲಿ ಅರ್ಜೆಂಟೀನಾದ ‘ಡಿವಿಷನ್ ಪಲೆರ್ಮೊ – ಸೀಸನ್ 2’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಸೋನಿ ಲಿವ್ ಒಟಿಟಿಯ ‘ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್’ ಸರಣಿಯು ಅತ್ಯುತ್ತಮ ಡ್ರಾಮಾ ಸರಣಿ ವಿಭಾಗದಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ಅರ್ಜೆಂಟೀನಾದ ಸರಣಿಗಳ ವಿರುದ್ಧ ಸ್ಪರ್ಧಿಸಿತು. ಅಂತಿಮವಾಗಿ ಫ್ರಾನ್ಸ್‌ನ ‘ಕ್ಯಾರೆಮ್’ ಸರಣಿ ಪ್ರಶಸ್ತಿ ಗೆದ್ದುಕೊಂಡಿತು. ಮಹೇಶ್ ಮಥಾಯ್ ಮತ್ತು ರಾಜೇಶ್ ಮಾಪುಸ್ಕರ್ ನಿರ್ದೇಶನದ ಈ ಸರಣಿಯಲ್ಲಿ ಮೊಹಮ್ಮದ್ ಜೀಶನ್ ಅಯೂಬ್ ಹಾಗೂ ಮಾನವ್ ಕೌಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮೊದಲ ವೃತ್ತಿಪರ ಫುಟ್ಬಾಲ್ ತಂಡ ಕಟ್ಟಿದ ನೈಜ ಕಥೆಯನ್ನು ಈ ಸರಣಿ ಹೇಳುತ್ತದೆ. ಪತ್ರಕರ್ತ ಸೊಹೈಲ್ ಮತ್ತು ಉದ್ಯಮಿ ಶಿಶಿರ್ ಸೇರಿ ತಂಡ ಕಟ್ಟಲು ಎದುರಿಸುವ ಸಂಕಷ್ಟಗಳನ್ನು ಇದು ತೆರೆದಿಟ್ಟಿದೆ. ನಾಮನಿರ್ದೇಶನವೇ ಭಾರತಕ್ಕೆ ದೊಡ್ಡ ಗೆಲುವು ಮತ್ತು ಇದರಿಂದ ಸರಣಿಗೆ ಹೆಚ್ಚಿನ ಜನರನ್ನು ತಲುಪಲು ಸಹಾಯವಾಗುತ್ತದೆ ಎಂದು ನಟ ಮಾನವ್ ಕೌಲ್ ಆಶಿಸಿದ್ದರು.

ಟೆಲಿವಿಷನ್ ಕ್ಷೇತ್ರದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಪ್ರತಿ ವರ್ಷ ನೀಡುವ ಈ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ಕೂಡ ಭಾಗವಹಿಸಿದ್ದರು.

Must Read