ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅಭಿನಯದ ಹೊಸ ತೆಲುಗು ಸಿನಿಮಾ ‘ಆಕಾಶಮ್ ಲೋ ಒಕ ತಾರ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವ ಈ ಚಿತ್ರ, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.
ಯಾವುದೇ ಸಿನಿಮಾದ ಅಸಲಿ ಸಾಮರ್ಥ್ಯ ತಿಳಿಯುವುದು ಸೋಮವಾರದ ಗಳಿಕೆಯಲ್ಲಿ. ‘ಆಕಾಶಮ್ ಲೋ ಒಕ ತಾರ’ ಚಿತ್ರ ಸೋಮವಾರ ಬರೋಬ್ಬರಿ 4 ಕೋಟಿ ರೂಪಾಯಿ ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ. ವಿಶೇಷವೆಂದರೆ, ಇದು ಮೊದಲ ದಿನದ ಗಳಿಕೆಗಿಂತ ಶೇ. 10 ರಷ್ಟು ಹೆಚ್ಚಾಗಿದೆ. ಈ ಮೂಲಕ ಚಿತ್ರ ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಪವನ್ ಸಾಧಿನೇನಿ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ವೇಗದಲ್ಲಿ ಸಾಗಿದರೆ ಮೊದಲ ವಾರದ ಅಂತ್ಯಕ್ಕೆ ಸಿನಿಮಾ 30 ಕೋಟಿ ರೂಪಾಯಿ ಗಡಿ ತಲುಪುವ ನಿರೀಕ್ಷೆಯಿದೆ. ಮುಂದಿನ ವಾರವೂ ಇದೇ ರೀತಿ ಪ್ರದರ್ಶನ ಕಂಡರೆ, ಚಿತ್ರ ‘ಕ್ಲೀನ್ ಹಿಟ್’ ಪಟ್ಟಕ್ಕೆ ಏರಲಿದೆ. ಇದರೊಂದಿಗೆ ತೆಲುಗು ಚಿತ್ರರಂಗದಲ್ಲಿ ದುಲ್ಕರ್ ಸಲ್ಮಾನ್ ಅವರ ಶೇ. 100 ರಷ್ಟು ಗೆಲುವಿನ ದಾಖಲೆ ಮುಂದುವರಿದಂತಾಗುತ್ತದೆ.
ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ಹೊಸ ಪ್ರತಿಭೆ ಸಾತ್ವಿಕಾ ವೀರವಲ್ಲಿ ನಟಿಸಿದ್ದಾರೆ. ಜೊತೆಗೆ ಶ್ರುತಿ ಹಾಸನ್, ರುಹಾನಿ ಶರ್ಮಾ, ಸ್ವಾಸಿಕಾ, ಮುರಳಿ ಶರ್ಮಾ, ಗೌತಮ್ ವಾಸುದೇವ್ ಮೆನನ್, ಗೆಟಪ್ ಶ್ರೀನು ಹಾಗೂ ಪ್ರವೀಣ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಸುಮಧುರ ಸಂಗೀತ, ಸುಜಿತ್ ಸಾರಂಗ್ ಅವರ ಛಾಯಾಗ್ರಹಣ ಹಾಗೂ ಪ್ರವೀಣ್ ಕೆ.ಎಲ್. ಅವರ ಸಂಕಲನ ಚಿತ್ರದ ಯಶಸ್ಸಿಗೆ ದೊಡ್ಡ ಬಲ ನೀಡಿದೆ.



