ಹೊಸದಿಗಂತ ವರದಿ ಅಂಕೋಲಾ:
ವೈಶ್ಯ ಸಮಾಜದ ವತಿಯಿಂದ ತಾಲೂಕಿನಲ್ಲಿ ಆಚರಿಸುತ್ತ ಬರಲಾಗುತ್ತಿರುವ ಶ್ರೀ ವಿಠ್ಠಲ ಸದಾಶಿವ ದೇವಾಲಯದ ಕಾರ್ತಿಕ ದೀಪೋತ್ಸವ ಮತ್ತು ವನಭೋಜನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಕಾಕರಮಠದ ವಿಠ್ಠಲ ಸದಾಶಿವ ದೇವಾಲಯದಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವರ ಪಲ್ಲಕಿ ಮೆರವಣಿಗೆ ಬಾಳೆಗುಳಿಯ ವನ ಪ್ರದೇಶಕ್ಕೆ ತೆರಳಿ ಅಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಲಾಯಿತು.
ಇದನ್ನೂ ಓದಿ:
ವನದಲ್ಲಿ ಶ್ರೀದೇವರ ವಿಶೇಷ ಪೂಜೆ ಮತ್ತಿತರ ಧಾರ್ಮಿಕ ವಿಧಿ ವಿಧಾನ ನಡೆಸಿ, ವನಭೋಜನ ಅನ್ನಪ್ರಸಾದ ವಿತರಿಸಲಾಯಿತು. ನೂರಾರು ಜನ ಭಕ್ತರು, ವೈಶ್ಯ ಸಮಾಜದ ಪ್ರಮುಖರು ಪಾಲ್ಗೊಂಡು ದೇವರ ವನಭೋಜನ ಪ್ರಸಾದ ಸ್ವೀಕರಿಸಿದರು.
ಸಂಜೆ ವನದಿಂದ ಮರಳಿದ ದೇವರ ಪಲ್ಲಕಿಯ ಉತ್ಸವ ಮೂರ್ತಿಯನ್ನು ಶ್ರೀಕಣಕಣೇಶ್ವರ ದೇವಾಲಯದ ಬಳಿ ಅಲಂಕೃತ ರಥದಲ್ಲಿ ವಿರಾಜಮಾನಗೊಳಿಸಿ ಹಳೆ ಬಜಾರ, ಮುಖ್ಯ ರಸ್ತೆ, ಬಂಡಿ ಬಾಜಾರ ಮಾರ್ಗವಾಗಿ ದೇವಾಲಯಕ್ಕೆ ಮರಳಲಾಯಿತು. ದೀಪೋತ್ಸವದ ಪ್ರಯುಕ್ತ ಕಾಕರಮಠದ ಬೀದಿಗಳನ್ನು ತಳಿರು ತೋರಣ, ವಿದ್ಯುತ್ ದೀಪ, ಹಣತೆ ದೀಪ ರಂಗೋಲಿಗಳಿಂದ ಅಲಂಕರಿಸಲಾಗಿತ್ತು.



