ಹೊಸದಿಗಂತ ವರದಿ ರಾಣೇಬೆನ್ನೂರ:
ಸಿನಿಮಾ ಚಿತ್ರೀಕರಣಗಳಲ್ಲಿ ಬಳಸುವ ಮಾದರಿಯ ನೋಟುಗಳನ್ನು ರಾಷ್ಟ್ರೀಯ ಬ್ಯಾಂಕ್ನ ಎಟಿಎಂ ಮೂಲಕ ಚಲಾವಣೆಗೆ ಯತ್ನಿಸಿದ ಇಬ್ಬರನ್ನು ರಾಣೇಬೆನ್ನೂರು ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಮೇಡ್ಲೇರಿ ಗ್ರಾಮದ ಸುರೇಶ ಬಿಲ್ಲಾಳ ಹಾಗೂ ಮಾಲತೇಶ ಮೈಲಾರ ಬಂಧಿತರು.
ಆರೋಪಿಗಳು 500 ರೂ.ಮುಖಬೆಲೆಯ 76 ನಕಲಿ ನೋಟುಗಳನ್ನು ಎಟಿಎಂ ಮೂಲಕ ಖಾತೆಗೆ ಜಮೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಎಟಿಎಂ ಯಂತ್ರವು ನೋಟುಗಳನ್ನು ಗುರುತಿಸಿ ಎಚ್ಚರಿಕೆ ನೀಡಿದೆ. ಇದರಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಪರಿಶೀಲನೆ ನಡೆಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಾಗ ಸಿನಿಮಾ ಚಿತ್ರೀಕರಣಕ್ಕೆ ಬಳಸುವ ಪ್ರಾಪರ್ಟಿ ಮನಿ ಮಾದರಿಯ ನೋಟುಗಳನ್ನು ಚಲಾವಣೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ‘ಚಿಲ್ಡ್ರನ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂಬ ಹೆಸರಿನ ನಕಲಿ ನೋಟುಗಳನ್ನು ಬಳಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ:
ಬಂಧಿತ ಆರೋಪಿಗಳಿಂದ 500 ರೂ. ಮುಖಬೆಲೆಯ ಒಟ್ಟು 1 ಸಾವಿರ ಚಿತ್ರೀಕರಣ ಮಾದರಿಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ನೋಟುಗಳನ್ನು ಎಲ್ಲಿಂದ ತರಲಾಗಿತ್ತು, ಇವುಗಳ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಹಾಗೂ ಇಂತಹ ಕೃತ್ಯಗಳಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಕುರಿತು ರಾಣೇಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



