ಹೊಸದಿಗಂತ ವರದಿ ರಾಣೇಬೆನ್ನೂರ:
ರಾಣೇಬೆನ್ನೂರು ಹಾಗೂ ಹರಿಹರ ಸೇರಿದಂತೆ ವಿವಿಧ ನಗರಗಳಲ್ಲಿ ರಾತ್ರಿ ವೇಳೆ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ರಾಣೇಬೆನ್ನೂರು ಶಹರ ಠಾಣೆಯ ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು 5.97 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ರಾಣೇಬೆನ್ನೂರು ನಗರದ ದೊಡ್ಡಪೇಟೆಯ ಗವಾರದ ಓಣಿಯ ನಿವಾಸಿ ಮುಬಾರಕ್ ಅಲಿಯಾಸ್ ಮೊಟಿಯಾ ಹುಸೇನ್ ಬ್ಯಾಡಗಿ (23) ಎಂದು ಗುರುತಿಸಲಾಗಿದೆ.
ಆರೋಪಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ಈ ಹಿಂದೆಯೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದನು. ಜೈಲಿನಿಂದ ಬಿಡುಗಡೆಯಾದ ಬಳಿಕ ಭಟ್ಕಳದಿಂದ ಆಗಾಗ್ಗೆ ರಾಣೇಬೆನ್ನೂರಿಗೆ ಬಂದು ಹೋಗುತ್ತಿದ್ದ ಈತ, ರಾಣೇಬೆನ್ನೂರು ಹಾಗೂ ಹರಿಹರ ನಗರಗಳಲ್ಲಿ ರಾತ್ರಿ ವೇಳೆ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದನು. ವಿಚಾರಣೆ ವೇಳೆ ಈ ಕೃತ್ಯಗಳನ್ನು ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:
ಆರೋಪಿಯಿಂದ ಒಂದು ಜೊತೆ ಬಂಗಾರದ ಜುಮುಕಿ, ಒಂದು ಬಂಗಾರದ ಬ್ರೇಸ್ಲೆಟ್, ಮೂರು ಜೊತೆ ಬಂಗಾರದ ಕಿವಿಯೋಲೆಗಳು ಸೇರಿದಂತೆ ಒಟ್ಟು 5.97 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಹಾಗೂ ಡಿವೈಎಸ್ಪಿ ಲೋಕೇಶ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಶಹರ ಪೊಲೀಸ್ ಠಾಣೆಯ ಸಿಪಿಐ ವೆಂಕಟೇಶ ನೇತೃತ್ವದಲ್ಲಿ ಪಿಎಸ್ಐಗಳಾದ ಪರಮೇಶ ಡಿ.ಜಿ., ಪಿ.ಎನ್. ದೊಡ್ಡಮನಿ ಹಾಗೂ ಸಿಬ್ಬಂದಿಗಳಾದ ಪಿ.ಕೆ. ಲಮಾಣಿ, ಪಿ.ಕೆ. ಸನದಿ, ಎಲ್.ಬಿ. ಕರಿಗಾರ, ಮೋಹನ ಮೇಲಗಿರಿ, ಹಾಲೇಶ ನಗಾವತ್, ಎಸ್.ಕೆ. ಬಿಲ್ಲಳ್ಳಿ ಮತ್ತು ಮಾರುತಿ ಹಾಲಭಾವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಕುರಿತು ರಾಣೇಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



