ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಗದ್ದಲ ಮತ್ತು ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಕೇಂದ್ರದ ಅಗ್ನಿಪಥ್ ಯೋಜನೆಗೆ ಉತ್ತಮ ಬೆಂಬಲ ಸಿಕ್ಕಿದ್ದು, ನೋಂದಣಿ ಪ್ರಕ್ರಿಯೆ ಪ್ರಾರಂಭವಾದ ಆರು ದಿನಗಳಲ್ಲಿ ಹೊಸ ನೇಮಕಾತಿ ಯೋಜನೆಯಡಿ ಭಾರತೀಯ ವಾಯುಪಡೆ(ಐಎಎಫ್) 2 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಜೂನ್ 24 ರಿಂದ ಅಗ್ನಿಪಥ್ ಯೋಜನೆಯ ನೋಂದಣಿ ಆರಂಭವಾಗಿದ್ದು, ಸೋಮವಾರದವರೆಗೆ 94,281 ಹಾಗೂ ಭಾನುವಾರದವರೆಗೆ 56,960 ಅರ್ಜಿಗಳು ಬಂದಿದ್ದವು.
ರಕ್ಷಣಾ ಸಚಿವಾಲಯದ ವಕ್ತಾರ ಎ. ಭಾರತ್ ಭೂಷಣ್ ಇಂದು ಟ್ವೀಟ್ ಮಾಡಿದ್ದು,’2,01,000+ ಆಕಾಂಕ್ಷಿಗಳು ಅಗ್ನಿವೀರ್ ವಾಯು ಆಗಲು ಅರ್ಜಿ ಸಲ್ಲಿಸಿದ್ದಾರೆ. ಜುಲೈ 5, 2022 ಕೊನೆಯ ದಿನಾಂಕವಾಗಿದೆ’ ಎಂದು ತಿಳಿಸಿದ್ದಾರೆ.
ಭಾರತೀಯ ವಾಯುಪಡೆ ಸಹ ಈ ಕುರಿತು ಟ್ವೀಟ್ ಮಾಡಿ, ‘ಈವರೆಗೆ 1,83,634 ಭವಿಷ್ಯದ ಅಗ್ನಿವೀರರು ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 5, 2022ಕ್ಕೆ ನೋಂದಣಿ ಮುಕ್ತಾಯವಾಗುತ್ತದೆ’ ಎಂದು ಹೇಳಿದೆ.