ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲು ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡು ಬೇಸರದಿಂದ ಇದ್ದ ವಿದ್ಯಾರ್ಥಿನಿಗೆ ಭಾರತೀಯ ರೈಲ್ವೆಯು ಪರಿಹಾರ ನೀಡಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಸಮೃದ್ಧಿ ಎಂಬ ವಿದ್ಯಾರ್ಥಿನಿ 2018ರಲ್ಲಿ ಲಕ್ನೋದಲ್ಲಿ ನಡೆಯಬೇಕಿದ್ದ ಬಿ.ಎಸ್ಸಿ ಬಯೋಟೆಕ್ನಾಲಜಿ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಿತ್ತು. ಇದಕ್ಕಾಗಿ ಅವರು ಬಸ್ತಿಯಿಂದ ಲಕ್ನೋಗೆ ಇಂಟರ್‌ಸಿಟಿ ಸೂಪರ್‌ಫಾಸ್ಟ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು.ಬೆಳಿಗ್ಗೆ 11 ಗಂಟೆಗೆ ಲಕ್ನೋ ತಲುಪಬೇಕಿದ್ದ ರೈಲು ಸುಮಾರು 2.5 ಗಂಟೆ ತಡವಾಗಿ ತಲುಪಿತು. ಪರೀಕ್ಷಾ ಕೇಂದ್ರಕ್ಕೆ ಮಧ್ಯಾಹ್ನ 12:30ರೊಳಗೆ ಹೋಗಬೇಕಿದ್ದ ರೈಲು ವಿಳಂಬವಾದ ಕಾರಣ ಸಮೃದ್ಧಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಅವರ ಒಂದು ವರ್ಷದ ಎಲ್ಲ ಪರಿಶ್ರಮ ಕೂಡ ವ್ಯರ್ಥವಾಗಿದೆ.
ಈ ಅನ್ಯಾಯದ ವಿರುದ್ಧ ಸಮೃದ್ಧಿ ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋದರು. ಸುಮಾರು 8 ವರ್ಷಗಳ ಕಾಲ ಈ ವಿಚಾರವಾಗಿ ಸುದೀರ್ಘ ಕಾನೂನು ಹೋರಾಟ ನಡೆಯಿತು. ಜಿಲ್ಲಾ ಗ್ರಾಹಕ ಆಯೋಗವು ರೈಲ್ವೆ ಇಲಾಖೆಯ ಸೇವೆಯಲ್ಲಿ ಲೋಪವಿದೆ ಎಂದು ಹೇಳಿದೆ. ವಿದ್ಯಾರ್ಥಿನಿಯ ಶೈಕ್ಷಣಿಕ ನಷ್ಟ ಮತ್ತು ಮಾನಸಿಕ ಕಿರಿಕಿರಿಗಾಗಿ 9.10 ಲಕ್ಷ ರೂ. ಪರಿಹಾರ ನೀಡುವಂತೆ ರೈಲ್ವೆಗೆ ಆದೇಶ ನೀಡಿದೆ.
ಈ ಹಣವನ್ನು 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ, ವಾರ್ಷಿಕ 12% ಬಡ್ಡಿಯನ್ನು ಸೇರಿಸಿ ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸಾಮಾನ್ಯವಾಗಿ ರೈಲು ವಿಳಂಬವಾದರೆ ನಾವು ಸುಮ್ಮನಿರುತ್ತೇವೆ. ಆದರೆ ಈ ತೀರ್ಪು ರೈಲ್ವೆ ಇಲಾಖೆಯು ಸಮಯ ಪಾಲನೆ ಮಾಡದಿದ್ದರೆ ಮತ್ತು ಅದರಿಂದ ಪ್ರಯಾಣಿಕರಿಗೆ ಗಂಭೀರ ನಷ್ಟವಾದರೆ ಅವರು ಹೊಣೆಗಾರರಾಗುತ್ತಾರೆ ಎಂಬುದನ್ನು ತಿಳಿಸಿಕೊಟ್ಟಿದೆ.
ಈ ಬಗ್ಗೆ ನೊಂದ ಸಮೃದ್ಧಿ ತನ್ನ ವಕೀಲರ ಮೂಲಕ 20 ಲಕ್ಷ ರೂ. ಪರಿಹಾರ ಅರ್ಜಿ ಸಲ್ಲಿಸಿದರು. ರೈಲ್ವೆ ಸಚಿವಾಲಯ, ಜನರಲ್ ಮ್ಯಾನೇಜರ್ ಮತ್ತು ನಿಲ್ದಾಣದ ಸೂಪರಿಂಟೆಂಡೆಂಟ್‌ಗೆ ನೋಟಿಸ್‌ಗಳನ್ನು ನೀಡಲಾಯಿತು, ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಜಿಲ್ಲಾ ಗ್ರಾಹಕ ಆಯೋಗವು ರೈಲ್ವೆ ಇಲಾಖೆಯು ಸಕಾಲಿಕ ಸೇವೆಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಹೇಳಿತ್ತು. ಇದಕ್ಕಾಗಿ ಸಮೃದ್ಧಿ 8 ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ.



