February 5, 2026
Thursday, February 5, 2026
spot_img

ಸದನದಲ್ಲಿ ಅಸಂವಿಧಾನಿಕ ಪದ ಬಳಕೆ ಸರಿಯಲ್ಲ: ಮಹೇಶ್ ಟೆಂಗಿನಕಾಯಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಸದನದಲ್ಲಿ ಹಿರಿಯ ಶಾಸಕರು, ಸಚಿವರನ್ನು ನೋಡಿ ಕಲಿಯಬೇಕಾಗುತ್ತದೆ. ಮೊದಲ ಬಾರಿ ಶಾಸಕರಾದವರಿಗೆ ಅವರ ಮಾರ್ಗದರ್ಶನ ಬಹಳ ಅವಶ್ಯಕ. ಅಸಂವಿಧಾನಿಕ ಪದ ಬಳಸುವುದು ಸರಿಯಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಿವಲಿಂಗೇಗೌಡರ ಹೇಳಿಕೆಗಳನ್ನು ಈ ರೀತಿ ಖಂಡಿಸಿದ ಅವರು, ಸದನವನ್ನು ಇಡೀ ರಾಜ್ಯದ ಜನರು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನನ್ನ ಸಹೋದರಿಯಂತೆ. ಅವರು ನನ್ನ ಬಗ್ಗೆ ಮಾತನಾಡಿದ ವಯಕ್ತಿಕ ಹೇಳಿಕೆಗಳನ್ನು ಪ್ರೀತಿಯಿಂದ ತೆಗೆದುಕೊಳ್ಳುತ್ತೇನೆ. ನಾನು ಸದನದಲ್ಲಿ ಧ್ವನಿ ಎತ್ತಿರುವುದು ಇಲಾಖೆಯ ಲೋಪದೋಷದ ವಿರುದ್ಧ ಹೊರತು, ವಯಕ್ತಿಕವಲ್ಲ ಎಂದು ತಿಳಿಸಿದರು.

ಗೃಹ ಲಕ್ಷ್ಮೀ ಹಣ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ೧.೨೪ ಕೋಟಿ ಫಲಾನುಭವಿಗಳಿಗೆ ೫ ಸಾವಿರ ಕೋಟಿ ನೀಡಿಲ್ಲ ಎಂದು ದಾಖಲೆ ಸಮೇತ ಸದನ ಗಮನ ಸೆಳೆದಿದ್ದು, ಇಷ್ಟು ದಿನವಾದರೂ ಹಣ ಬಂದಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರು ಹಸವಿನಿಂದ ಇರಬಾರದು, ಬಡವರ ಪರ ಸರ್ಕಾರ, ಎಲ್ಲರಿಗೂ ಉಚಿತ ಅಕ್ಕಿ ಎಂದು ಹೇಳಿದ್ದರು. ಆದರೆ ೧.೨೫ ಕೋಟಿ ಪಡಿತರರದಾರರಿಗೆ ಅಕ್ಕಿ ನೀಡಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಇದಕ್ಕೆ ಸಚಿವ ಮುನಿಯಪ್ಪ ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.

ಹಿಂದೆ ಕಾಂಗ್ರೆಸ್ ನವರು ಪೇ ಸಿಎಂ ಅಂತ ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅದಕ್ಕೆ ಇದು ವರೆಗೂ ಸಾಕ್ಷಿ ನೀಡಿಲ್ಲ. ಆದರೆ ಈಗ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ಅಬಕಾರಿ ಇಲಾಖೆ ಸಂಬಂಧಿಸಿ ಅಧಿಕಾರಿಗಳ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದಕ್ಕಿಂತ ಇನ್ನೂ ಏನು ಸಾಕ್ಷಿ ಬೇಕು ಎಂದು ಪ್ರಶ್ನಿಸಿದ ಅವರು, ಇದು ಬಂಡ ಸರ್ಕಾರವಾಗಿದೆ. ಸರ್ಕಾರ ಹಗರಣಗಳನ್ನು ಜನರ ಮುಂದೆ ಇಡುವ ಕೆಲಸ ಮಾಡುತ್ತಿದ್ದೇವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !