February 7, 2026
Saturday, February 7, 2026
spot_img

ಡ್ರ್ಯಾಗನ್ ರಾಷ್ಟ್ರಕ್ಕೆ ಟಕ್ಕರ್: ಇಂಧನ-ರಕ್ಷಣಾ ಕ್ಷೇತ್ರದಲ್ಲಿ ಕೈಜೋಡಿಸಿದ ಮೋದಿ-ಟ್ರಂಪ್ ಜೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಭಾರತದ ಸರಕುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ 25% ದಂಡನಾತ್ಮಕ ಸುಂಕವನ್ನು ರದ್ದುಗೊಳಿಸುವ ಮಹತ್ವದ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ಈ ನಿರ್ಧಾರದೊಂದಿಗೆ ಉಭಯ ದೇಶಗಳ ನಡುವಿನ ವ್ಯಾಪಾರ ಸಮರಕ್ಕೆ ತೆರೆ ಬಿದ್ದಂತಾಗಿದೆ.

ಈ ಹಿಂದೆ ಭಾರತದ ಮೇಲಿನ ಮೂಲ ಸುಂಕವನ್ನು 25% ರಿಂದ 15% ಕ್ಕೆ ಇಳಿಸಲಾಗಿತ್ತು. ಈಗ ರಷ್ಯಾ ತೈಲ ಖರೀದಿಯ ಕಾರಣಕ್ಕೆ ಹೇರಲಾಗಿದ್ದ ಹೆಚ್ಚುವರಿ 25% ಸುಂಕವನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಅಮೆರಿಕ ಮತ್ತು ಭಾರತದ ನಡುವೆ ಒಟ್ಟು 500 ಶತಕೋಟಿ ಡಾಲರ್‌ ಮೌಲ್ಯದ ಬೃಹತ್ ವ್ಯಾಪಾರ ಒಪ್ಪಂದ ಏರ್ಪಟ್ಟಿದ್ದು, ಇದು ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಭಾರತ ಸಮ್ಮತಿಸಿದೆ. ಈ ಬದ್ಧತೆಯ ಹಿನ್ನೆಲೆಯಲ್ಲಿ ಟ್ರಂಪ್ ಆಡಳಿತವು ಭಾರತಕ್ಕೆ ಸುಂಕ ವಿನಾಯಿತಿ ನೀಡಿದೆ.

ಭಾರತವು ಇನ್ಮುಂದೆ ಅಮೆರಿಕದ ಇಂಧನ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲಿದೆ. ಅಲ್ಲದೆ, ಮುಂದಿನ 10 ವರ್ಷಗಳ ಕಾಲ ರಕ್ಷಣಾ ಸಹಕಾರವನ್ನು ವಿಸ್ತರಿಸುವ ಮಹತ್ವದ ಚೌಕಟ್ಟಿಗೆ ಎರಡೂ ದೇಶಗಳು ಅಂಕಿತ ಹಾಕಿವೆ.

ಅಮೆರಿಕದ ಈ ಸಕಾರಾತ್ಮಕ ನಿರ್ಧಾರಕ್ಕೆ ಪ್ರತಿಯಾಗಿ, ಭಾರತವೂ ಸಹ ಅಮೆರಿಕದಿಂದ ಆಮದಾಗುವ ಕೈಗಾರಿಕಾ ಸರಕುಗಳು ಹಾಗೂ ಪ್ರಮುಖ ಆಹಾರ ಧಾನ್ಯಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಅಮೆರಿಕದ ಉತ್ಪನ್ನಗಳ ಲಭ್ಯತೆಯನ್ನು ಸುಲಭಗೊಳಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !