February 11, 2026
Wednesday, February 11, 2026
spot_img

ಟೇಕ್ ಆಫ್ ಆದ 15 ನಿಮಿಷದಲ್ಲೇ ತಾಂತ್ರಿಕ ದೋಷ: ಸಮುದ್ರ ತೀರದಲ್ಲಿ ನಿಂತ ಪ್ರಯಾಣಿಕರ ವಿಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಮಾಲಿಯಾದ ಮೊಗಾದಿಶು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡದೊಂದು ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಲಾದ ಪ್ರಯಾಣಿಕ ವಿಮಾನವೊಂದು ರನ್‌ವೇಯಿಂದ ಜಾರಿ ನೇರವಾಗಿ ಹಿಂದೂ ಮಹಾಸಾಗರದ ತೀರಕ್ಕೆ ನುಗ್ಗಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ಎಲ್ಲಾ 55 ಮಂದಿ ಸುರಕ್ಷಿತವಾಗಿದ್ದಾರೆ.

ಸ್ಟಾರ್‌ಸ್ಕಿ ಏವಿಯೇಷನ್ ಸಂಸ್ಥೆಗೆ ಸೇರಿದ ಈ ವಿಮಾನವು ಮೊಗಾದಿಶುವಿನಿಂದ ಗಾಲ್ಕಸಿಯೊ ನಗರಕ್ಕೆ ತೆರಳುತ್ತಿತ್ತು. ವಿಮಾನ ಟೇಕ್ ಆಫ್ ಆದ ಕೇವಲ 15 ನಿಮಿಷಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಪೈಲಟ್‌ಗಳು ವಿಮಾನವನ್ನು ವಾಪಸ್ ಮೊಗಾದಿಶುವಿನ ಅಡೆನ್ ಅಬ್ದುಲ್ಲೆ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದರು.

ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ನಿಯಂತ್ರಣ ತಪ್ಪಿ ರನ್‌ವೇಯಿಂದ ಹೊರಕ್ಕೆ ಜಾರಿತು. ವೇಗವಾಗಿ ಚಲಿಸಿದ ವಿಮಾನವು ಸಮೀಪದ ಕಡಲತೀರದ ಮರಳಿನಲ್ಲಿ ಹೋಗಿ ನಿಂತಿದೆ. ವಿಮಾನದಲ್ಲಿ 50 ಪ್ರಯಾಣಿಕರು ಹಾಗೂ 5 ಮಂದಿ ಸಿಬ್ಬಂದಿ ಸೇರಿ ಒಟ್ಟು 55 ಜನರಿದ್ದರು. ಘಟನೆಯಲ್ಲಿ ವಿಮಾನದ ಮುಂಭಾಗ ಹಾನಿಗೊಳಗಾಗಿದ್ದರೂ, ಯಾರಿಗೂ ಗಾಯಗಳಾಗಿಲ್ಲ ಎಂದು ಸಂಸ್ಥೆಯ ಸಿಇಒ ಅಹ್ಮದ್ ನೂರ್ ತಿಳಿಸಿದ್ದಾರೆ.

ಇದನ್ನೂ ಓದಿ:

ಘಟನೆ ನಡೆದ ಕೂಡಲೇ ರಕ್ಷಣಾ ತಂಡಗಳು ಕಾರ್ಯಪ್ರವೃತ್ತರಾಗಿ ಎಲ್ಲರನ್ನೂ ಸುರಕ್ಷಿತವಾಗಿ ಹೊರತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಮೊಹಮ್ಮದ್ ಫರಾಹ್ ನುಹ್, “ಎಲ್ಲಾ ಪ್ರಯಾಣಿಕರು ಕ್ಷೇಮವಾಗಿದ್ದಾರೆ. ತಾಂತ್ರಿಕ ದೋಷಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ” ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !