ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನ 11ನೇ ಆವೃತ್ತಿಗೆ ಸಜ್ಜಾಗುತ್ತಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಕೂಡ ಶುರುವಾಗಿದೆ. ಆದ್ರೆ ಅಫ್ಘಾನಿಸ್ತಾನದ ಆಟಗಾರರು ತಮ್ಮ ಹೆಸರುಗಳನ್ನು ಹಿಂತೆಗೆದುಕೊಂಡಿದ್ದಾರೆ.
ಲಾಹೋರ್‌ನಲ್ಲಿ ನಡೆದ ಹರಾಜಿಗೆ ಮುಜೀಬ್ ಉರ್ ರೆಹಮಾನ್, ಸೆಡ್ಡಿಕುಲ್ಲಾ ಅಟಲ್, ಮೊಹಮ್ಮದ್ ನಬಿ, ವಕಾರ್ ಸಲಾಂಖೈಲ್, ಫಜಲ್ ಹಕ್ ಫಾರೂಕಿ ಮುಂತಾದ ಆಟಗಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಫ್ರಾಂಚೈಸಿ ಮಾಲೀಕರು ಆರಂಭದಲ್ಲಿ ದೃಢಪಡಿಸಿದ್ದರು. ಆದರೆ, ಪೇಶಾವರ್ ಝಲ್ಮಿ ತಂಡವು ನೇರವಾಗಿ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲ ಗುರ್ಬಾಜ್ ಅವರನ್ನು ಖರೀದಿಸಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದ ನಂತರ ತಮ್ಮ ಹೆಸರುಗಳನ್ನು ಹಿಂತೆಗೆದುಕೊಂಡಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧ ಹದಗೆಟ್ಟ ಕಾರಣ ಪೇಶಾವರ್ ಝಲ್ಮಿ ತಂಡವು ರಹಮಾನುಲ್ಲಾ ಗುರ್ಬಾಜ್ ಅವರನ್ನು ಖರೀದಿಸಿದ ನಂತರ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಳಿಕ ಗುರ್ಬಾಜ್ ಅವರೇ ಪಿಎಸ್ಎಲ್‌ನಿಂದ ಹಿಂದೆ ಸರಿದಿದ್ದರು. ನಂತರ, ಇತರ ಆಟಗಾರರು ಸಹ ಇದೇ ರೀತಿಯ ಟೀಕೆ ಅಥವಾ ವಿವಾದದಿಂದ ಪಾರಾಗಲು ದೂರ ಸರಿಯಲು ನಿರ್ಧರಿಸಿದ್ದಾರೆ.
ಕಳೆದ ವರ್ಷ ಪಾಕಿಸ್ತಾನ ಸೇನೆಯು ಉಗ್ರರನ್ನು ಗುರಿಯಾಗಿಸುವ ನೆಪದಲ್ಲಿ ಅಫ್ಘಾನಿಸ್ತಾನದ ಆಯ್ದ ಪ್ರದೇಶಗಳಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ.



