ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ಜಗತ್ತು ಇಂದು ಇಂಧನದ ಅಭಾವ ಮತ್ತು ಬೆಲೆ ಏರಿಕೆಯ ಭೀತಿಯಲ್ಲಿ ನಡುಗುತ್ತಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಸತ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ಹಡಗುಗಳ ಸಂಚಾರಕ್ಕೆ ದೊಡ್ಡ ಅಡಚಣೆ ಉಂಟಾಗಿದೆ. ಮಧ್ಯಪ್ರಾಚ್ಯದ ಈ ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆ ತೀವ್ರ ಒತ್ತಡಕ್ಕೆ ಸಿಲುಕಿದ್ದು, ಇಂಧನ ಭದ್ರತೆಯ ಬಗ್ಗೆ ಜಗತ್ತಿನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಆದರೆ, ಇಂತಹ ಸವಾಲಿನ ನಡುವೆಯೂ ಭಾರತ ತಳೆದಿರುವ ರಾಜತಾಂತ್ರಿಕ ನಡೆ ಮತ್ತು ಇಂಧನ ನೀತಿ ಇಂದು ಇಡೀ ವಿಶ್ವದ ಗಮನ ಸೆಳೆದಿದೆ. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ಹೆಮ್ಮೆಯನ್ನು ಮತ್ತಷ್ಟು ಎತ್ತಿಹಿಡಿದಿದ್ದಾರೆ.
‘ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್’ ಆಯೋಜಿಸಿದ್ದ ಮಹತ್ವದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಆಲ್ಬನೀಸ್, ಭಾರತದ ಇಂಧನ ವಲಯದ ಬೆಳವಣಿಗೆಯನ್ನು ಕೊಂಡಾಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯನ್ನು ನಾವು ಸದಾ ಗುರುತಿಸಲೇಬೇಕು. ಮಾನವ ಇತಿಹಾಸದ ಯಾವುದೇ ದಶಕದಲ್ಲಿ, ಯಾವುದೇ ಪ್ರದೇಶದಲ್ಲಿ ಅಥವಾ ಯಾವುದೇ ದೇಶದಲ್ಲೂ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಜನರಿಗೆ ಇಂಧನ ಸೌಲಭ್ಯ ಒದಗಿಸಿದ ಉದಾಹರಣೆಯೇ ಇಲ್ಲ. ಮೋದಿಯವರ ಆಡಳಿತಾವಧಿಯಲ್ಲಿ ಭಾರತ ಸಾಧಿಸಿದ ಈ ಇಂಧನ ವಿಸ್ತರಣೆ ನಿಜಕ್ಕೂ ಅಭೂತಪೂರ್ವ,” ಎಂದು ಬಣ್ಣಿಸಿದ್ದಾರೆ.
ಅಷ್ಟೇ ಅಲ್ಲದೆ, ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಜೊತೆ ಅತ್ಯಂತ ನಿಕಟ ಮತ್ತು ಸೌಹಾರ್ದಯುತ ಬಾಂಧವ್ಯ ಹೊಂದಿರುವ ನಾಯಕರಾಗಿದ್ದಾರೆ ಎಂದು ಬಣ್ಣಿಸಿದ ಅವರು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದನ್ನು ಉಲ್ಲೇಖಿಸಿದರು.
ಒಟ್ಟಾರೆಯಾಗಿ, ಜಗತ್ತು ಇಂಧನಕ್ಕಾಗಿ ಪರದಾಡುತ್ತಿರುವ ಈ ಕಷ್ಟದ ಸಮಯದಲ್ಲಿ ಭಾರತ ತೋರಿಸಿರುವ ಹಾದಿ ಮತ್ತು ಕೈಗೊಂಡ ನಿರ್ಧಾರಗಳು ಇಂದು ವಿಶ್ವಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿವೆ. ಪ್ರಧಾನಿ ಮೋದಿಯವರ ಈ ಜಾಗತಿಕ ದೂರದೃಷ್ಟಿ ಭಾರತವನ್ನು ‘ಇಂಧನ ಸುರಕ್ಷಿತ’ ದೇಶವನ್ನಾಗಿ ಮಾಡಿದೆ.



