ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ರಾಜ್ಯದಲ್ಲಿ ತುರ್ತು ಲ್ಯಾಂಡಿಂಗ್ ಗೆ ಸಿದ್ಧವಾಗಿರುವ ಹೆದ್ದಾರಿ ರನ್‌ವೇಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಮಾನ ಯಶಸ್ವಿಯಾಗಿ ಇಳಿದು ಇತಿಹಾಸ ನಿರ್ಮಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾದ ‘ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿ’ ವ್ಯವಸ್ಥೆಯನ್ನು ಉದ್ಘಾಟಿಸಿದ ಬಳಿಕ ಅದೇ ಮಾರ್ಗದಲ್ಲಿ ವಿಮಾನ ಇಳಿಸುವ ಮೂಲಕ ಯೋಜನೆಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸಲಾಯಿತು.
ಯುದ್ಧ ಅಥವಾ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ವಾಯುಪಡೆಯ ವಿಮಾನಗಳು ಸುರಕ್ಷಿತವಾಗಿ ಇಳಿಯಲು ಅನುಕೂಲವಾಗುವಂತೆ ಈ ಹೆದ್ದಾರಿಯನ್ನು ವಿನ್ಯಾಸಗೊಳಿಸಲಾಗಿದೆ. ಗಡಿ ಭಾಗಗಳಿಗೆ ವೇಗವಾಗಿ ಸೇನೆಯ ನೆರವು ತಲುಪಿಸಲು ಇದು ಸಹಾಯಕವಾಗಲಿದೆ. ಯುದ್ಧ ವಿಮಾನಗಳು ಹಾಗೂ ಸರಕು ಸಾಗಣೆ ವಿಮಾನಗಳು ಸಹ ಇಲ್ಲಿ ಇಳಿಯುವಂತೆ ಸೌಕರ್ಯ ಕಲ್ಪಿಸಲಾಗಿದೆ.
ಇದನ್ನೂ ಓದಿ:
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುಮಾರು 40 ನಿಮಿಷಗಳ ವೈಮಾನಿಕ ಪ್ರದರ್ಶನ ನಡೆಯಿತು. ವಿವಿಧ ಯುದ್ಧ ವಿಮಾನಗಳು ಹಾಗೂ ಸಾರಿಗೆ ವಿಮಾನಗಳು ಹಾರಾಟ ನಡೆಸಿ ರಕ್ಷಣಾ ಸಾಮರ್ಥ್ಯ ತೋರಿಸಿವೆ. ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತ ಈ ಯೋಜನೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ವಾಯುಪಡೆಯ ಸಮನ್ವಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಸೇನೆ ಮತ್ತು ನಾಗರಿಕ ಬಳಕೆಗೆ ಇದು ಮಹತ್ವದ ಮೂಲಸೌಕರ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ.



