ಹೊಸದಿಗಂತ ವರದಿ, ಮಂಗಳೂರು:
ಚಿಕ್ಕಮಗಳೂರಿನಲ್ಲಿ ಮನೆಯೊಂದರ ಮೇಲೆ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಘಟನೆಯ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮಕ್ಕೆ ಸೂಚಿಸಲಾಗಿದೆ. ಆ ಪ್ರಕಾರ ಪೊಲೀಸರು ಪಿಸಿಆರ್ ಆಕ್ಟ್ ಅಡಿ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ. ಮನೆಯ ಹೆಣ್ಣು ಮಗಳು ದಲಿತ ಸಮುದಾಯಕ್ಕೆ ಸೇರಿದವರು ಎಂದು ಗೊತ್ತಾಗಿದೆ ಎಂದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು ಕಾಂಗ್ರೆಸ್ ಶಾಸಕರು ಯಾಕೆ ವಿದೇಶ ಪ್ರವಾಸ ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರವರ ಹಣದಲ್ಲಿ ಅವರು ಎಲ್ಲಿ ಬೇಕಾದರೂ ಹೋಗಬಹುದು. ನಮ್ಮಲ್ಲಿ ಕುರ್ಚಿ ಕದನವಂತೂ ಇಲ್ಲ ಎಂದರು.
ಎಚ್.ಸಿ ಮಹದೇವಪ್ಪ ದಲಿತ ಸಿ.ಎಂ ಹೇಳಿಕೆ ವಿಚಾರಕ್ಕೆ ಸಂಬಂಽಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಮಹದೇವಪ್ಪ ಅವರ ಅಭಿಪ್ರಾಯ ಹೇಳಿದ್ದಾರೆ. ಅವರು ಸಿಎಂ ಆಗಲು ಸಮರ್ಥರಿದ್ದಾರೆ. ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ. ಅದಕ್ಕೆ ಅವರು ಆ ರೀತಿ ಹೇಳಿದ್ದಾರೆ. ಜನಸಮುದಾಯದಲ್ಲಿ ಕೆಲವರು ಅವರವರ ಲೀಡರ್ ಅಂತಾ ಆರಿಸಿಕೊಳ್ಳುತ್ತಾರೆ. ಜನ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅದನ್ನು ತಪ್ಪೆಂದು ನಾವು ಹೇಳುವುದಕ್ಕೆ ಆಗುವುದಿಲ್ಲ. ಏನೇ ಆದರೂ ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಈಗ ದಲಿತ ಸಿಎಂ ಚರ್ಚೆಯೇ ಇಲ್ಲ ಎಂದರು.
ಪ್ರಿಯಾಂಕ ಖರ್ಗೆ ಅವರು ಆರ್‌ಎಸ್‌ಎಸ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಕುರಿತು ನನ್ನ ಅಭಿಪ್ರಾಯ ಬೇರೆಯೇ ಇದೆ. ಅವರ ಅಭಿಪ್ರಾಯಕ್ಕೆ ನನ್ನ ಹೇಳಿಕೆ ಅಗತ್ಯವಿಲ್ಲ ಎಂದು ಅವರು ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.
ಬೆಳ್ತಂಗಡಿ ಸುಮಂತ್ ಎಂಬ ಬಾಲಕನ ಅನುಮಾನಸ್ಪದ ಸಾವು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಪ್ರಕರಣ ತನಿಖೆಯ ಹಂತದಲ್ಲಿದೆ. ಆದ್ದರಿಂದ ಪೊಲೀಸರು ಕೆಲವೊಂದು ಮಾಹಿತಿಗಳನ್ನು ಬಹಿರಂಗ ಪಡಿಸುತ್ತಿಲ್ಲ. ತನಿಖೆಯ ಹಂತದಲ್ಲಿ ಮಾಹಿತಿಗಳು ಬಹಿರಂಗ ಮಾಡಿದಲ್ಲಿ ಅಪರಾಧ ಮಾಡಿದವರು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ತನಿಖೆಯ ಹಂತದಲ್ಲಿ ಪೊಲೀಸರು ಏನನ್ನೂ ಹೇಳುವುದಿಲ್ಲ. ನನಗೆ ಹೇಳಿದರೂ ನಾನೂ ಅದನ್ನು ಸಾರ್ವಜನಿಕವಾಗಿ ಹೇಳುವಂತಿಲ್ಲ ಎಂದರು.
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಈಗ ಶಾಂತಿ ನೆಲೆಸಿದೆ. ಇಲ್ಲಿಗೆ ತಮ್ಮ ಮಕ್ಕಳನ್ನು ಮಂಗಳೂರಿಗೆ ಶಿಕ್ಷಣಕ್ಕೆ ಕಳುಹಿಸುವುದಿಲ್ಲ, ಮೈಸೂರು ಇನ್ನಿತರೆಡೆಗೆ ಕಳುಹಿಸುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಈಗ ಅಂತಹ ವಾತಾವರಣವಿಲ್ಲ. ಈಗ ಅನೈತಿಕ ಪೊಲೀಸ್‌ಗಿರಿ ಇಲ್ಲವೆಂದು ಪೊಲೀಸರೇ ಹೇಳುತ್ತಿದ್ದಾರೆ. ಆದ್ದರಿಂದ ಇಲ್ಲಿ ಶಾಂತಿ ಮರುಕಳಿಸುತ್ತಿದೆ ಎಂದು ಹೇಳಲೇಬೇಕಾಗುತ್ತದೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆಯವರು ಕರಾವಳಿಯಲ್ಲಿ ಕೋಮುಸಂಘರ್ಷಕ್ಕೆ ಕಡಿವಾಣ ಬಿದ್ದಿಲ್ಲ ಎಂಬ ಮಾತು ನಿಮ್ಮ ಅಭಿಪ್ರಾಯಕ್ಕೆ ವ್ಯತಿರಿಕ್ತ ಹೇಳಿಕೆಯಂತಿಲ್ಲವೇ ಎಂಬ ಪ್ರಶ್ನೆಗೆ ಗೃಹಸಚಿವರು ಪ್ರತಿಕ್ರಿಯಿಸಿ, ಅವರೇನೋ ಹೇಳಲಿ ನಾನು ಪೊಲೀಸರಿಂದ ಅಧಿಕೃತ ಮಾಹಿತಿ ಪಡೆದು ಹೇಳಿಕೆ ನೀಡುತ್ತಿದ್ದೇನೆ. ಆದರೆ ಹಿಂದೆ ಆ ರೀತಿಯ ಅಶಾಂತಿಯ ವಾತಾವರಣ ಇದ್ದದಂತೂ ಸತ್ಯ. ಆದರೆ ಅದು ಬದಲಾವಣೆ ಆಗಿದೆ. ಇದನ್ನು ಓರ್ವ ಗೃಹಸಚಿವನಾಗಿ ಪೊಲೀಸ್ ದೃಷ್ಟಿಯಿಂದ ಹೇಳುತ್ತಿದ್ದೇನೆ. ಅವರು ಯಾವ ದೃಷ್ಟಿಕೋನದಿಂದ ಹೇಳಿದರೋ ನನಗೆ ಗೊತ್ತಿಲ್ಲ ಎಂದರು.
ಕರಾವಳಿಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕದ ಮೇಲೆ ಪೊಲೀಸರು ನಿಲ್ಲಿಸುತ್ತಿದ್ದಾರೆ ಎಂಬ ಆರೋಪದ ಪ್ರಶ್ನೆಗೆ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಾನೂನು ಮಾಡಿದ ಬಳಿಕ ಸಂಪ್ರದಾಯದ ವಿಚಾರ ಬರುವುದಿಲ್ಲ. ಸಂಪ್ರದಾಯ ಎಂದು ಕಾನೂನು ಬಿಟ್ಟುಬಿಡಲು ಆಗುತ್ತದೆಯೇ? ನನ್ನಲ್ಲೂ ಕೋಳಿ ಅಂಕ ಪರವಾನಿಗೆ ಕೊಡಲು ಕೇಳಿದ್ದಾರೆ. ಕಾನೂನಿನಲ್ಲಿ ಬೆಟ್ಟಿಂಗ್ ಮಾಡಲು ಅವಕಾಶವಿಲ್ಲ. ಕಾನೂನು ಬಾಹಿರ ವಿಚಾರವನ್ನು ಅನುಮತಿಸಲಾಗುವುದಿಲ್ಲ. ಯಾವುದೇ ಬೆಟ್ಟಿಂಗ್ ಇಲ್ಲ, ಬರಿಯ ಸಂಪ್ರದಾಯಕ್ಕಾಗಿ ಕೋಳಿ ಅಂಕ ನಡೆಸಲಾಗುತ್ತದೆ ಎಂದು ಮನವರಿಕೆ ಆದಲ್ಲಿ ಆದರೆ ಸ್ಥಳೀಯ ಪೊಲೀಸರು ಪರವಾನಿಗೆ ನೀಡಬಹುದು ಎಂದರು.



