ಹೊಸದಿಗಂತ ಡಿಜಿಟಲ್ ಡೆಸ್ಕ್:
2017ರ ಚೆಕ್‌ಬೌನ್ಸ್ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಅಮೀಶಾ ಪಟೇಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.
2017ರ ನವೆಂಬರ್ 16ರಂದು ಮೊರಾದಾಬಾದ್‌ನ ಮದುವೆ ಸಮಾರಂಭಕ್ಕೆ ಆಗಮಿಸುವ ಸಲುವಾಗಿ ಪವನ್ ವರ್ಮಾ ಜತೆ 14.50 ಲಕ್ಷ ರೂ.ಗಳಿಗೆ ಅಮೀಶಾ ಮಾತುಕತೆ ಮಾಡಿದ್ದರು. ಆದರೆ ಅಮೀಶಾ ಅಂದು ಮೊರಾದಾಬಾದ್‌ಗೆ ಬರಲಿಲ್ಲ. ಬದಲಾಗಿ 10 ಲಕ್ಷ ರೂ. ನಗದು ಹಣವನ್ನು ನೀಡಿದ್ದರು. ಉಳಿದ 4.50 ಲಕ್ಷಕ್ಕೆ ಚೆಕ್ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದೆ. ಹೀಗಾಗಿ ಪವನ್ ವರ್ಮಾ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಸಂಬಂಧ ಮೊರಾದಾಬಾದ್ ಕೋರ್ಟ್‌ನಿಂದ ಹಲವು ಬಾರಿ ಅಮೀಶಾ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ, ಅಮೀಶಾ ವಿಚಾರಣೆಗೆ ಹಾಜರಾಗಿರಲಿಲ್ಲ.ಇದೀಗ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.
ಈ ಕುರಿತ ಅಮೀಶಾ ಪಟೇಲ್ ಪರ ವಕೀಲ ಅಭಿಷೇಕ್ ಶರ್ಮಾ ಮಾಹಿತಿ ಹಂಚಿಕೊಂಡಿದ್ದು, ‘ಇದು 2017ರಲ್ಲಿ ನಡೆದ ಘಟನೆ ಇದೆ. ಈಗಾಗಲೇ ಪೂರ್ಣ ಹಣ ಪಾವತಿಯೂ ಆಗಿದೆ. ಆದರೆ ಈಗ ಕಾನೂನನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತಂತೆ ಅಮೀಶಾ ಪಟೇಲ್ ಅವರು ಕೋರ್ಟ್‌ಗೆ ಹಾಜರಾಗಿ ಸ್ಪಷ್ಟನೆ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಅಮೀಶಾ ಪಟೇಲ್ ರಿಯಾಕ್ಷನ್ ನೀಡಿದು, ಇದು ವರ್ಷಗಳ ಹಿಂದಿನ ಬಹಳ ಹಳೆಯ ಪ್ರಕರಣವಾಗಿದೆ. ಈ ವಿಷಯದಲ್ಲಿ ಪವನ್ ವರ್ಮಾ ಅವರು ಈಗಾಗಲೇ ರಾಜೀ ಒಪ್ಪಂದಕ್ಕೆ ಸಹಿ ಹಾಕಿ, ಒಪ್ಪಂದದ ಪ್ರಕಾರ ಸಂಪೂರ್ಣ ಹಣವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ವ್ಯಕ್ತಿಯ ಸುಳ್ಳುಗಳನ್ನು ಬಯಲಿಗೆಳೆಯಲು ನನ್ನ ವಕೀಲರು ಅವರ ವಿರುದ್ಧ ಸೂಕ್ತ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯುವದಕ್ಕಾಗಿ ಇಂತಹ ಸಾರ್ವಜನಿಕ ಪ್ರಹಸನ ಮಾಡುವವರನ್ನು ನಾನು ನಿರ್ಲಕ್ಷಿಸುತ್ತೇನೆ ಮತ್ತು ನನ್ನ ಕೆಲಸದತ್ತ ಹೆಚ್ಚು ಗಮನ ಹರಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ.



