ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ । ದೇಶದ ಮೊದಲ AI-ಚಾಲಿತ ಏರ್ ಟ್ಯಾಕ್ಸಿ ಮಾದರಿ ಪ್ರದರ್ಶನ!
ಭಾರತ್ ಮಂಟಪದಲ್ಲಿ ನಡೆದ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಭಾರತದ ಮೊದಲ AI-ಚಾಲಿತ ಏರ್ ಟ್ಯಾಕ್ಸಿ ಮಾದರಿಯನ್ನು ಪ್ರದರ್ಶಿಸಲಾಯಿತು.
ಐಐಟಿ ಮದ್ರಾಸ್ ಸಹಯೋಗದೊಂದಿಗೆ “ದಿ ಇ-ಪ್ಲೇನ್ ಕಂಪನಿ” ಅಭಿವೃದ್ಧಿಪಡಿಸಿದೆ. ಇದು ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಅಂಡ್ ಲ್ಯಾಂಡಿಂಗ್ (eVTOL) ತಂತ್ರಜ್ಞಾನ ಆಧಾರಿತ ವಿಮಾನವಾಗಿದ್ದು, ನಗರಗಳಲ್ಲಿ ಸಂಚಾರದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲು ರೂಪಿಸಲಾಗಿದೆ.
ದಟ್ಟ ನಗರ ಪ್ರದೇಶಗಳಲ್ಲಿ, ಸಣ್ಣ ಲ್ಯಾಂಡಿಂಗ್ ಪ್ಯಾಡ್‌ಗಳಲ್ಲಿ ಇದು ಕಾರ್ಯನಿರ್ವಹಿಸಲಿದ್ದು, , ಜನರ ಕೆಗೆಟಕುವ ಬೆಲೆಯಲ್ಲಿ ಈ ಸೇವೆಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಇಮ್ ಕುರಿತು ಉದಾಹರಣೆ ಸಮೇತ ವಿವರಿಸಿದ ಕಂಪೆನಿ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಬಿ ಸಿಟಿಗೆ 36 ಕಿ.ಮೀ ಪ್ರಯಾಣ ರಸ್ತೆ ಮಾರ್ಗದಲ್ಲಿ ಸುಮಾರು 2 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ. ಆದರೆ ಏರ್ ಟ್ಯಾಕ್ಸಿಯಲ್ಲಿ ಕೇವಲ 8 ನಿಮಿಷಗಳಲ್ಲಿ ಕ್ರಮಿಸಬಹುದಾಗಿದ್ದು, ಅಂದಾಜು ದರ ಸುಮಾರು 1,700 ರೂ. ಶುಲ್ಕವನ್ನು ನಿಗದಿ ಪಡಿಸಲಾಗಿದೆ.
ಸ್ವದೇಶಿ ಉತ್ಪನ್ನವಾಗಲಿದ್ದು, ವಿಮಾನ ದೇಹ, ಏರ್‌ಫ್ರೇಮ್ ಮತ್ತು ಪ್ರೊಪೆಲ್ಲರ್‌ಗಳನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಕೆಲವು ಪ್ರಮುಖ ಘಟಕಗಳು ವಿದೇಶದಲ್ಲಿ ತಯಾರಾಗಲಿವೆ. ಮತ್ತೊಂದು ವೈಶಿಷ್ಟ್ಯವೆಂದರೆ ಒಂದೇ ಚಾರ್ಜ್‌ನಲ್ಲಿ ಮಲ್ಟಿ-ಸ್ಟಾಪ್ ಸಾಮರ್ಥ್ಯ. ಪ್ರತಿ ಲ್ಯಾಂಡಿಂಗ್ ನಂತರ ಪ್ಲಗ್ ಇನ್ ಮಾಡಿ ರೀಚಾರ್ಜ್ ಮಾಡುವ ಬದಲು, ವಿಮಾನವು ಒಂದೇ ಬ್ಯಾಟರಿ ಚಾರ್ಜ್ ಬಳಸಿ ಬಹು ಸ್ಥಳಗಳಲ್ಲಿ ಇಳಿಯಬಹುದು.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಕಂಪನಿಗೆ ವಿನ್ಯಾಸ ಸಂಸ್ಥೆ ಅನುಮೋದನೆ (DOA) ನೀಡಿದೆ. ಅಂತಿಮ ಉತ್ಪಾದನಾ ಮಾದರಿ ಸಿದ್ಧವಾದ ನಂತರ ಪರೀಕ್ಷಾ ಹಾರಾಟಗಳು ಆರಂಭವಾಗಲಿವೆ.



