ಹೊಸದಿಗಂತ ವರದಿ,ಶಿರಸಿ:
ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಪ್ರಯಾಣಿಕರ ಅತಿಯಾದ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಭಕ್ತಾದಿಗಳ ಸುಗಮ ಪ್ರಯಾಣಕ್ಕಾಗಿ ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಸಾಗರದ ತಾಳಗುಪ್ಪ ನಡುವೆ ವಿಶೇಷ ರೈಲನ್ನು (Express Special Train) ಓಡಿಸಲು ನಿರ್ಧರಿಸಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ರೈಲ್ವೆ ಮಂಡಳಿಯ ಅನುಮೋದನೆಯ ಮೇರೆಗೆ ಫೆಬ್ರವರಿ 27 ಮತ್ತು 28ರಂದು ಈ ವಿಶೇಷ ಸೇವೆಯು ಲಭ್ಯವಿರಲಿದ್ದು, ರೈಲುಗಳ ವೇಳಾಪಟ್ಟಿ ಈ ಕೆಳಗಿನಂತಿದೆ:
ರೈಲು ಸಂಖ್ಯೆ 06587: ಫೆಬ್ರವರಿ 27ರ ಶುಕ್ರವಾರ ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಮುಂಜಾನೆ 05:05ಕ್ಕೆ ತಾಳಗುಪ್ಪ ತಲುಪಲಿದೆ.
ರೈಲು ಸಂಖ್ಯೆ 06588: ಫೆಬ್ರವರಿ 28ರ ಶನಿವಾರ ಬೆಳಿಗ್ಗೆ 09:30ಕ್ಕೆ ತಾಳಗುಪ್ಪದಿಂದ ಹೊರಟು ಅದೇ ದಿನ ಸಂಜೆ 05:15ಕ್ಕೆ ಯಶವಂತಪುರವನ್ನು ತಲುಪಲಿದೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಯಶವಂತಪುರ-ಶಿವಮೊಗ್ಗ ಟೌನ್ ನಡುವೆ ಸಂಚರಿಸುವ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು (16581/16582) ಸಹ ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಇದರಂತೆ ಮಾರ್ಚ್ 1ರ ಭಾನುವಾರದಂದು ಯಶವಂತಪುರದಿಂದ ಮಧ್ಯರಾತ್ರಿ 12:15ಕ್ಕೆ ಹೊರಡುವ ರೈಲು ಸಂಖ್ಯೆ 16581 ಶಿವಮೊಗ್ಗದ ಬದಲಾಗಿ ಬೆಳಿಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದ್ದು, ಅದೇ ದಿನ ರಾತ್ರಿ 10 ಗಂಟೆಗೆ ತಾಳಗುಪ್ಪದಿಂದಲೇ ತನ್ನ ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16582 ಮರುದಿನ ಬೆಳಿಗ್ಗೆ 4:45ಕ್ಕೆ ಯಶವಂತಪುರ ತಲುಪಲಿದೆ.
ಶಿರಸಿ ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರ ಹಿತದೃಷ್ಟಿಯಿಂದ ವಿಶೇಷ ರೈಲು ಸೌಲಭ್ಯ ಒದಗಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ತಕ್ಷಣ ಸ್ಪಂದಿಸಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿರುವ ಕೇಂದ್ರ ರೈಲ್ವೆ ಸಚಿವರಿಗೆ, ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದಾಗಿ ಅವರು ತಿಳಿಸಿದ್ದಾರೆ.



