ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ ಮಾರ್ಚ್ 5 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್2ರ ಮಧ್ಯರಾತ್ರಿಯಿಂದಲೇ ಭಾರತ ಮತ್ತು ನೇಪಾಳ ಗಡಿಯಲ್ಲಿ ಸಂಚಾರ ಬಂದ್ ಮಾಡಿ, ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮುಖ್ಯಸ್ಥ ಸುಧೀರ್ ಶರ್ಮಾ, ರಾಜ್ಯದ ಬಂಕೆ ಜಿಲ್ಲೆಯ ಸಂಪೂರ್ಣ ಗಡಿ ಭಾಗಗಳನ್ನು ಮಾರ್ಚ್ 2ರ ಮಧ್ಯರಾತ್ರಿ 12ರಿಂದ ಬಂದ್ ಮಾಡಲಾಗುವುದು. ಈ ಮೂಲಕ ನೇಪಾಳದಲ್ಲಿ ಮುಕ್ತ, ಸುರಕ್ಷಿತ, ನಿರ್ಭಯ ಮತ್ತು ವಿಶ್ವಾಸಾರ್ಹ ಪರಿಸ್ಥಿತಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದಿದ್ದಾರೆ.
ಈ ಅವಧಿಯವರೆಗೆ ಅಗತ್ಯ ವೈದ್ಯಕೀಯ ಮತ್ತು ನೀರು, ಹಾಲಿನ ಟ್ಯಾಂಕರ್, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ನಿರ್ಣಾಯಕ ಸರಕುಗಳ ಸಂಚಾರಕ್ಕೆ ಅಡ್ಡಿ ಇಲ್ಲ ಎಂದಿದ್ದಾರೆ.
ಅಧಿಕೃತ ದಾಖಲೆಗಳ ಪರಿಶೀಲನೆ ಬಳಿಕವೇ ಜನರಿಗೆ ಗಡಿ ದಾಟಲು ಅವಕಾಶ ನೀಡಲಾಗುವುದು. ಎರಡೂ ದೇಶಗಳ ನಾಗರಿಕರು ನಿರ್ಬಂಧಿತ ಅವಧಿಯಲ್ಲಿ ತೀರಾ ಅಗತ್ಯವಿಲ್ಲದಿದ್ದರೆ ಗಡಿ ದಾಟದಿರುವಂತೆ ಸೂಚಿಸಲಾಗಿದೆ.
ಚುನಾವಣೆಯ ವೇಳೆ ಗಡಿ ಭಾಗದಿಂದ ಅಕ್ರಮ ಶಸ್ತ್ರಾಸ್ತ್ರಗಳು ಸರಬರಾಜಾಗುವ ಹಿನ್ನೆಲೆಯಲ್ಲಿ ಗಸ್ತು ಹೆಚ್ಚಿಸಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಎರಡೂ ದೇಶಗಳ ಭದ್ರತಾ ಪಡೆಗಳ ನಡುವೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.



