ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಿಗೆ ಮಹತ್ವದ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಮೊದಲ ಹಂತದಲ್ಲಿ ರಾಜಸ್ಥಾನ್ ರಾಜ್ಯದಲ್ಲಿ ಸುಮಾರು 16,680 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗುತ್ತದೆ. ನಗರಾಭಿವೃದ್ಧಿ, ಕುಡಿಯುವ ನೀರು, ರಸ್ತೆ, ನೀರಾವರಿ ಮತ್ತು ಇಂಧನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಕಾಮಗಾರಿಗಳು ಇದರಲ್ಲಿವೆ.
ಅಮೃತಸರ–ಜಾಮ್‌ನಗರ ಆರ್ಥಿಕ ಕಾರಿಡಾರ್ ಭಾಗವಾದ ಜೈಪುರ–ಬಂಡಿಕುಯಿ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ, ದೆಹಲಿ–ವಡೋದರಾ ಎಕ್ಸ್‌ಪ್ರೆಸ್‌ವೇ ವಿಭಾಗ ಸೇರಿದಂತೆ ಹಲವು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಯಲಿದೆ. ಜೊತೆಗೆ ವಿದ್ಯುತ್ ವಿತರಣೆಗೆ ಗ್ರಿಡ್ ಸಬ್‌ಸ್ಟೇಷನ್‌ಗಳ ಅಡಿಪಾಯ ಹಾಗೂ ಸಾವಿರಾರು ಯುವಕರಿಗೆ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವೂ ಜರುಗಲಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗೆ ರಾಷ್ಟ್ರವ್ಯಾಪಿ ಹೆಚ್‌ಪಿವಿ ಲಸಿಕಾ ಅಭಿಯಾನಕ್ಕೂ ಚಾಲನೆ ಸಿಗಲಿದೆ.
ಇದನ್ನೂ ಓದಿ:
ನಂತರ ಗುಜರಾತ್ ರಾಜ್ಯದ ಸನಂದ್‌ನಲ್ಲಿ 22,500 ಕೋಟಿ ರೂ. ವೆಚ್ಚದ ದೇಶದ ಅತಿದೊಡ್ಡ ಸೆಮಿಕಂಡಕ್ಟರ್ ಅಸೆಂಬ್ಲಿ ಘಟಕವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
ಇದಾದ ಬಳಿಕ ಮೋದಿ ಚೆನ್ನೈಗೆ ಪ್ರಯಾಣಿಸಿ ನಾಳೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.



