ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಿದ್ದಂತೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಅಸ್ಥಿರತೆಯ ಸಮಯದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೊರೆ ಹೋಗುತ್ತಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಈಗಾಗಲೇ ಗೋಲ್ಡ್ ಇಟಿಎಫ್ ಹಾಗೂ ಸೆಂಟ್ರಲ್ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ವಾತಾವರಣ ಹೂಡಿಕೆದಾರರಲ್ಲಿ ಭಯ ಸೃಷ್ಟಿಸಿದೆ. ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ತುಪ್ಪ ಸುರಿದಂತಾಗಿದೆ.
ಜಗತ್ತಿನ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳು ತಮ್ಮ ಮೀಸಲು ನಿಧಿಯಲ್ಲಿ ಚಿನ್ನದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿವೆ.
ಭಾರತದಲ್ಲಿ ಸೋಮವಾರದ ವಹಿವಾಟು ಕುತೂಹಲಕಾರಿಯಾಗಿತ್ತು. ಆರಂಭದಲ್ಲಿ ಬೆಲೆ ಇಳಿಕೆ ಕಂಡರೂ, ನಂತರ ಚೇತರಿಸಿಕೊಂಡು 4.37% ರಷ್ಟು ಏರಿಕೆ ದಾಖಲಿಸಿತು. ಸದ್ಯ ಅಪರಂಜಿ ಚಿನ್ನದ ದರ ₹17,000 ಗಡಿ ತಲುಪಿದ್ದರೆ, ಬೆಳ್ಳಿ ದರವು ಪ್ರತಿ ಗ್ರಾಂಗೆ ₹296ರ ಗಡಿ ದಾಟಿ ಮುನ್ನುಗ್ಗುತ್ತಿದೆ.



