ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಭಟನೆ ನಡೆಸುವುದು ಸಂವಿಧಾನ ನೀಡಿರುವ ಹಕ್ಕು. ಆದರೆ ಸಾರ್ವಜನಿಕ ಸ್ಥಳವನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಂಡು ಇತರರ ವ್ಯಾಪಾರ, ಉದ್ಯೋಗ ಮತ್ತು ಜೀವನೋಪಾಯಕ್ಕೆ ಅಡ್ಡಿಯಾಗಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಾಗೂ ಅದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದೆ ಎಂದು ವರ್ತಕರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ನಿಲುವು ತಿಳಿಸಿದೆ.
ಪ್ರತಿಭಟನಾ ಸ್ಥಳ ಎಲ್ಲರಿಗೂ ಲಭ್ಯವಾಗಬೇಕು
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ, ನಿಗದಿತ ಪ್ರತಿಭಟನಾ ಸ್ಥಳಗಳನ್ನು ಒಂದೇ ಸಂಘಟನೆ ನಿರಂತರವಾಗಿ ಬಳಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ರೈತರು, ಪತ್ರಕರ್ತರು ಸೇರಿದಂತೆ ವಿವಿಧ ಸಂಘಟನೆಗಳಿಗೂ ಪ್ರತಿಭಟನೆ ನಡೆಸಲು ಅವಕಾಶ ಸಿಗಬೇಕು. ಹೀಗಾಗಿ ಪ್ರತಿಯೊಂದು ಸಂಘಟನೆಗೆ ನಿರ್ದಿಷ್ಟ ಅವಧಿಗೆ ಸ್ಥಳ ನೀಡುವ ವ್ಯವಸ್ಥೆ ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ರಾಮಲೀಲಾ ಮೈದಾನದ ಪ್ರತಿಭಟನೆಯಿಂದ ವ್ಯಾಪಾರಕ್ಕೆ ಹೊಡೆತ
ಕಿರಾಣಿ ಸಮಿತಿ ದೆಹಲಿ ಸೇರಿದಂತೆ ಹಲವು ವರ್ತಕರ ಸಂಘಟನೆಗಳು ಸಲ್ಲಿಸಿರುವ ಅರ್ಜಿಯಲ್ಲಿ, ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ದೀರ್ಘಕಾಲದ ಪ್ರತಿಭಟನೆಗಳಿಂದ ಸುತ್ತಮುತ್ತಲಿನ ವ್ಯಾಪಾರ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ಆರೋಪಿಸಲಾಗಿದೆ.
ಹಬ್ಬದ ಸಮಯದಲ್ಲಿ ಅಂಗಡಿಗಳು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದ್ದು, ಸಂಚಾರ ನಿರ್ಬಂಧ ಮತ್ತು ಪೊಲೀಸ್ ಬ್ಯಾರಿಕೇಡ್ಗಳಿಂದ ಮಾರುಕಟ್ಟೆಗಳಿಗೆ ಪ್ರವೇಶ ಕಷ್ಟವಾಗಿದೆ ಎಂದು ವರ್ತಕರು ದೂರಿದ್ದಾರೆ.
ಇದನ್ನೂ ಓದಿ:
ಎರಡು ತಿಂಗಳ ನಿರ್ಬಂಧಕ್ಕೆ ಮನವಿ
ವರ್ತಕರ ಪರ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಪ್ರತಿಭಟನೆಗಳಿಂದ ಲಕ್ಷಾಂತರ ಜನರ ಜೀವನ ಮತ್ತು ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು ನ್ಯಾಯಾಲಯದ ಗಮನ ಸೆಳೆದರು. ಮುಂದಿನ ಎರಡು ತಿಂಗಳ ಕಾಲ ದೆಹಲಿಯಲ್ಲಿ ಧರಣಿ ಮತ್ತು ಪ್ರತಿಭಟನೆಗಳಿಗೆ ನಿರ್ಬಂಧ ವಿಧಿಸುವಂತೆ ಮನವಿ ಮಾಡಿದರು.
ಎಲ್ಲರ ವಾದ ಕೇಳಲು ಸುಪ್ರೀಂ ಸೂಚನೆ
ವ್ಯಾಪಾರಿಗಳ ನಷ್ಟಕ್ಕೆ ಕಾರಣವಾಗಿರುವ ರ್ಯಾಲಿಗಳನ್ನು ಸಂಘಟಿಸಿದ ರಾಜಕೀಯ ಪಕ್ಷಗಳನ್ನು (ಇಂಡಿಯಾ ಮೈತ್ರಿಕೂಟದ ಪಕ್ಷಗಳು) ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಸೇರ್ಪಡೆಗೊಳಿಸುವಂತೆ ಅರ್ಜಿದಾರರಿಗೆ ಕೋರ್ಟ್ ನಿರ್ದೇಶನ ನೀಡಿದೆ. ಜೊತೆಗೆ ಕೇಂದ್ರ, ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ನೋಟಿಸ್ ನೀಡಿ ವಾರದೊಳಗೆ ಉತ್ತರ ಸಲ್ಲಿಸಲು ಸೂಚಿಸಲಾಗಿದೆ.



