November 3, 2026
Tuesday, November 3, 2026
spot_img

ಬೇಡ್ತಿ-ಅಘನಾಶಿನಿ ವರದಾ ನದಿ ತಿರುವು ಯೋಜನೆಗೆ ತೀವ್ರ ವಿರೋಧ: ಯಲ್ಲಾಪುರದಲ್ಲಿ ಹೆದ್ದಾರಿ ತಡೆದು ಆಕ್ರೋಶ

ಹೊಸದಿಗಂತ ವರದಿ ಯಲ್ಲಾಪುರ:

ಉತ್ತರ ಕನ್ನಡ ಜಿಲ್ಲೆಯ ಪರಿಸರ ಹಾಗೂ ಜನಜೀವನಕ್ಕೆ ಮಾರಕವಾಗಿರುವ ಬೇಡ್ತಿ-ಅಘನಾಶಿನಿ ವರದಾ ನದಿ ತಿರುವು ಯೋಜನೆಯನ್ನು ತಕ್ಷಣವೇ ಕೈ ಬಿಡುವಂತೆ ಒತ್ತಾಯಿಸಿ ಯಲ್ಲಾಪುರದಲ್ಲಿ ಮಂಗಳವಾರ ಬೃಹತ್ ಹೆದ್ದಾರಿ ತಡೆ ನಡೆಸಿದ್ದಾರೆ.

ಸಹಸ್ರಾರು ಸಂಖ್ಯೆಯಲ್ಲಿ ಪಕ್ಷ ಭೇದ ಮರೆತು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ರಸ್ತೆಗೆ ಇಳಿದ ಪ್ರತಿಭಟನಾಕಾರರು ಯೋಜನೆ ಕೈ ಬಿಡುವವರೆಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಜಿಲ್ಲೆಯ ಜನರ ಕೂಗಿಗೆ ಆಳುವ ಸರ್ಕಾರ ಸ್ಪಂದಿಸದಿದ್ದರೆ, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದ್ದಾರೆ.

ನಿಷ್ಪ್ರಯೋಜಕ ಯೋಜನೆ:

ರಸ್ತೆ ತಡೆಗೂ ಮುನ್ನ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪರಿಸರ ಹೋರಾಟಗಾರ ಬಿ.ಎಂ. ಕುಮಾರಸ್ವಾಮಿ, ಈ ಜನಸ್ತೋಮವನ್ನು ನೋಡಿ ನಮ್ಮ ಜನಪ್ರತಿನಿಧಿಗಳು ಈಕಡೆಯೋ ಆಕಡೆಯೋ ಎನ್ನುವುದನ್ನು ನಿರ್ಧರಿಸಬೇಕು. ನದಿಗಳು ಸಮುದ್ರವನ್ನು ಸೇರಲೇಬೇಕು ಎನ್ನುವುದು ಪ್ರಕೃತಿಯ ನಿಯಮ. ಅದನ್ನರಿಯದ ರಾಜಕಾರಿಗಳು ಹಾಗೂ ನಿಷ್ಪ್ರಯೋಜಕ ಆರ್ಥಿಕ ತಜ್ಞರು ಇಂತಹ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

2012 ರಲ್ಲಿ ಆರಂಭಗೊಂಡ ಎತ್ತಿನಹೊಳೆ ಯೋಜನೆಯ ನೀರು ಇನ್ನೂ ಸಹ ಘಟ್ಟ ಹತ್ತದೆ ಇರುವುದು ಇದಕ್ಕೆ ಸಾರ್ಥಕ ನಿದರ್ಶನವಾಗಿದೆ. ಈ ಯೋಜನೆಗಳು ನೀರಿನ ಹೊಳೆ ತಿರುವುಗಿಂತ, ಹಣದ ಹೊಳೆಯ ತಿರುವಿನ ಮೂಲವಾಗಿದೆ. ವಿ.ಆರ್. ಹೆಗಡೆ ಅವರು ವೈಜ್ಞಾನಿಕವಾಗಿ ಮಾಹಿತಿ ಕಲೆಹಾಕಿ, ಬೇಡ್ತಿ ಕಣಿವೆಯಲ್ಲಿ ಬೀಳುವ ಬಹುತೇಕ ಪಾಲಿನ ಮಳೆ ನದಿಗೆ ತಲುಪುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸರ್ಕಾರದ ಯೋಜನೆಯ ಪ್ರಕಾರ ದೊರಕುವ 18.5 ಟಿಎಂಸಿ ನೀರಿನಲ್ಲಿ 5 ಟಿಎಂಸಿ ನೀರು ಸಹ ದೊರಕುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.

ಹೋರಾಟ ಸಮಿತಿಯ ಅಧ್ಯಕ್ಷ ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ ಮಾತನಾಡಿ, ಒಂದೂವರೆ ವರ್ಷದಿಂದಲೂ ಸರ್ಕಾರ ನಮ್ಮ ಒಕ್ಕೊರಲಿನ ಆಗ್ರಹಕ್ಕೆ ಮಣೆಯುತ್ತಿಲ್ಲ. ಮುಂದೆ ನಮ್ಮ ಜಿಲ್ಲೆಯನ್ನೇ ಉಳಿಸಿಕೊಳ್ಳುವ ಅವಶ್ಯಕತೆ ಬಂದರೂ ಬರಬಹುದು. ನಮ್ಮಲ್ಲಿಯೇ ನೀರಿಲ್ಲದಿದ್ದಾಗ ಬಯಲುಸೀಮೆಗೆ ನೀರು ಹರಿಸುವ ಪ್ರಯತ್ನಕ್ಕೆ ನಮ್ಮೆಲ್ಲ ವಿರೋಧವಿದೆ. ನಮ್ಮೆಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಹೋರಾಡಿದಾಗ ಈ ಯೋಜನೆಯನ್ನು ತಡೆಯಬಹುದಾಗಿದೆ ಎಂದರು.

ಸಭೆಯಲ್ಲಿ ಸಂಸದ ವಿಶ್ವೇಶ್ವರಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್‌, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ಮಾಜಿ ಎಂಎಲ್‌ಸಿ ಶಾಂತಾರಾಮ ಸಿದ್ದಿ,ಬೇಡ್ತಿ ಅಘನಾಶಿನಿ ಕೊಳ್ಳ ಸಮಿತಿ ಅಧ್ಯಕ್ಷ ಅನಂತ್ ಆಶೀಸರ್, ಪ್ರಧಾನ ಸಂಚಾಲಕ ಹರಿಪ್ರಕಾಶ್ ಕೋಣೆಮನೆ,ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ, ಪ್ರಮುಖರು ಇದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಅಂಕೋಲಾ ಹೆದ್ದಾರಿಯ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

Must Read

Skip to toolbar