November 3, 2026
Tuesday, November 3, 2026
spot_img

ಕಬ್ಬಿನ ದರ ನಿಗದಿ ಸಭೆಗೆ ಕೆಲವೇ ರೈತರಿಗೆ ಆಹ್ವಾನ: ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಹೊಸದಿಗಂತ ವರದಿ ಬೆಳಗಾವಿ:

ಕಬ್ಬಿನ ಬೆಂಬಲ ಬೆಲೆ ನಿಗದಿಪಡಿಸುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ರೈತ ಮುಖಂಡರೊಂದಿಗೆ ಮಂಗಳವಾರ ಸಭೆ ಆಯೋಜಿಸಿದ್ದರು. ಆದರೆ ಸಭೆಗೆ ಕೆಲವೇ ರೈತರನ್ನು ಆಹ್ವಾನಿಸಿ, ಉಳಿದ ರೈತರನ್ನು ಹೊರಗಡೆ ನಿಲ್ಲಿಸುವ ವ್ಯವಸ್ಥೆ ಮಾಡಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ಈ ಕ್ರಮವನ್ನು ಖಂಡಿಸಿದ ರೈತರು, ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಸಭೆಗೆ ಕೆಲವರನ್ನು ಮಾತ್ರ ಒಳಗೆ ಬಿಡಲಾಗುವುದು, ಉಳಿದವರಿಗೆ ಪ್ರವೇಶವಿಲ್ಲ ಎಂದು ತಿಳಿಸುತ್ತಿದ್ದಂತೆಯೇ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಇದೇ ವೇಳೆ ರೈತರ ನಡುವೆಯೂ ಪರಸ್ಪರ ವಾಗ್ವಾದ ನಡೆಯಿತು. ಆಗ ಮಧ್ಯಪ್ರವೇಶಿಸಿದ ಕೆಲ ರೈತರು, ನಮ್ಮೊಳಗೆ ಭಿನ್ನಾಭಿಪ್ರಾಯ ಹಾಗೂ ಜಗಳ ಬೇಡ. ನಾವೆಲ್ಲರೂ ಕಬ್ಬಿನ ಬೆಂಬಲ ಬೆಲೆಗಾಗಿ ಹೋರಾಟ ನಡೆಸಲು ಬಂದಿದ್ದೇವೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಹೋರಾಡೋಣ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಗಣೇಶ ಇಳಗೇರ ಮಾತನಾಡಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ರೈತರ ಪರವಾಗಿ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸವಿದೆ. ರೈತರ ಬೇಡಿಕೆಗೆ ನ್ಯಾಯ ಸಿಗುವ ನಿರೀಕ್ಷೆಯಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ನೂರಾರು ರೈತರು, ರೈತ ಮುಖಂಡರು ಪಾಲ್ಗೊಂಡಿದ್ದರು.

Must Read